ಬೆಂಗಳೂರು,ಅ.4- ವರ್ಗಾವಣೆ ಕೋರಿ ನೇರವಾಗಿ ಆಯುಕ್ತರ ಕಚೇರಿಗೆ ಬರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ.
ಅಡುಗೋಡಿಯ ಸಿಎಆರ್ ಕವಾಯತು ಮೈದಾನದಲ್ಲಿ ಹಮಿಕೊಂಡಿದ್ದ ಮಾಸಿಕ ಕವಾಯತಿನಲ್ಲಿ ವಂದನೇ ಸ್ವೀಕರಿಸಿ ಮಾತನಾಡಿದ ಅವರು, ನಾವು ವರ್ಷದ ಕೊನೆಯ ಘಟ್ಟಕ್ಕೆ ಬಂದಿದ್ದೇವೆ. ಆದರೂ ಸಹ ಆಯುಕ್ತರ ಕಚೇರಿಗೆ ಕೆಲವು ಅಧಿಕಾರಿ ಮತ್ತು ಸಿಬ್ಬಂದಿಗಳು ಕೋರಿಕೆ ಪತ್ರವನ್ನು ಹಿಡಿದು ವರ್ಗಾವಣೆಗಾಗಿ ಬರುತ್ತಿದ್ದಾರೆ.
ಸಂದರ್ಶಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಯುಕ್ತರ ಕಚೇರಿಗೆ ವರ್ಗಾವಣೆ ಕೋರಿ ಬರುತ್ತಿರುವುದರಿಂದ ಕೆಲಸ ಮಾಡಲು ಆಗುತ್ತಿಲ್ಲ. ವರ್ಷಾಂತ್ಯಕ್ಕೆ ಕೇವಲ ಮೂರು ತಿಂಗಳು ಬಾಕಿ ಇದೆ. ಈಗಾಗಲೇ ಬಡ್ತಿ-ವರ್ಗಾವಣೆಯನ್ನು ಕೌನ್ಸಿಲ್ ಮೂಲಕ ಮಾಡಿ ಮುಗಿಸಲಾಗಿದೆ. ಆದರೂ ಕೆಲವರು ವರ್ಗಾವಣೆ ರದ್ದು ಕೋರಿ ಅದೇ ಠಾಣೆಗೆ ಅಥವಾ ಬೇರೆ ಕಡೆ ಹೋಗಲು ಬರುತ್ತಿರುವುದು ಸೂಕ್ತವಲ್ಲ ಎಂದರು.
ಒಂದು ವೇಳೆ ಅಂತಹ ತೊಂದರೆ ಇದ್ದಲ್ಲಿ ನಿಮ ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಉಪಪೊಲೀಸ್ ಆಯುಕ್ತರ ಶಿಫಾರಸ್ಸು ಪತ್ರದೊಂದಿಗೆ ವರ್ಗಾವಣೆ ಕೋರಿಕೆ ಪತ್ರವನ್ನು ಕಚೇರಿಗೆ ತಲುಪಿಸಿ ನೀವು ಬರಬೇಡಿ, ನಾವು ಅದನ್ನು ಪರಿಶೀಲಿಸಿ ಒಂದು ವೇಳೆ ಸೂಕ್ತವೆಂದು ಕಂಡುಬಂದರೆ ವರ್ಗಾವಣೆ ಮಾಡುತ್ತೇವೆ ಎಂದರು