ಚಿಕ್ಕೋಡಿ: ‘ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ವಿಚಾರದಲ್ಲಿ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಕಾಂಗ್ರೆಸ್ ಸರ್ಕಾರ ಮತೀಯ ಶಕ್ತಿಗಳನ್ನು ಪ್ರೋತ್ಸಾಹಿಸುತ್ತಿದೆ. ಕರ್ನಾಟಕ ರಾಜ್ಯವನ್ನು ಮತ್ತೊಂದು ತಾಲಿಬಾನ್, ಬಾಂಗ್ಲಾದೇಶ ಮಾಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೊರಟಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲಕುಮಾರ ಕಿಡಿಕಾರಿದರು.
ಪಟ್ಟಣದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಘಟಕದ ನೇತೃತ್ವದಲ್ಲಿ ಕಚೇರಿಯ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡ ಜಿಲ್ಲಾ ಮಟ್ಟದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು,
‘ಈ ಹಿಂದಿನ ಸರ್ಕಾರಗಳು ಆಡಳಿತ ಯಂತ್ರ ಬಳಕೆ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದವು. ಆದರೆ ಕಾಂಗ್ರೆಸ್ ಮಾತ್ರ ಸರ್ಕಾರದ ಹಣವನ್ನೇ ದುರ್ಬಳಕೆ ಮಾಡಿಕೊಂಡು ಚುನಾವಣೆ ಎದುರಿಸಿದ್ದು ನಾಚಿಕೆಗೇಡಿತನದ ಸಂಗತಿ. ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ಆಸು ಪಾಸಿನಲ್ಲಿಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಕೂಡ ವಿಸರ್ಜನೆಯಾಗುತ್ತದೆ’ ಎಂದು ಭವಿಷ್ಯ ನುಡಿದರು.
ಸದಸ್ಯತ್ವ ಅಭಿಯಾನ ಉದ್ದೇಶಿಸಿ ಚಿಕ್ಕೋಡಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಅಪ್ಪಾಜಿಗೋಳ ಮಾತನಾಡಿ, ‘ಸೆ 2 ರಿಂದ ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ನಿಗದಿತ ಗುರಿಯನ್ನು ತಲುಪಬೇಕು’ ಎಂದು ಹೇಳಿದರು.
Laxmi News 24×7