ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ 7ನೇ ಹಂತದ ಹೋರಾಟಕ್ಕಾಗಿ ಸೆ.22 ರಂದು ಬೆಳಗಾವಿಯಲ್ಲಿ ವಕೀಲರ ಸಭೆ ಆಯೋಜಿಸಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕಳೆದ ಮೂರುವರೆ ವರ್ಷದಿಂದ ವಿವಿಧ ರೀತಿಯಲ್ಲಿ ಹೋರಾಟ ನಡೆಸಿದ್ದೇವೆ.
ಭವಿಷ್ಯದಲ್ಲಿ ನಮ್ಮ ಹೋರಾಟ ತೀವ್ರತೆ ಪಡೆಯಲಿದೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ನಮ್ಮ ಸಮುದಾಯದ ಶಾಸಕರು ಎರಡು ಬಾರಿ ಮಾತನಾಡಿದ್ದರೂ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ನಮಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಿಲ್ಲ, ಸಮುದಾಯದ ಶಾಸಕರು ಸದನದಲ್ಲಿ ಪ್ರಶ್ನೆ ಕೇಳಲು ಮುಂದಾದಾಗ ಸಭಾಧ್ಯಕ್ಷರು ಅವಕಾಶ ನೀಡಿಲ್ಲ. ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ಒತ್ತಾಯ ಮಾಡಿದರೂ ಸ್ಪಂದಿಸಿಲ್ಲ ಎಂದು ಹರಿಹಾಯ್ದರು.
ಹೀಗಾಗಿ ಹೋರಾಟದ ಮುಂದಿನ ನಡೆಗಾಗಿ ಸೆ. 22 ರಂದು ಸಮುದಾಯದ ವಕೀಲರ ಸಭೆ ನಡೆಸುತ್ತಿದ್ದೇವೆ. ಸಮುದಾಯದ ವಕೀಲರ ಮೂಲಕ ಬಿಸಿ ಮುಟ್ಟಿಸಿ, ಸರ್ಕಾರದ ಕಣ್ಣು ತೆರೆಸುವ ಹೋರಾಟಕ್ಕೆ ಅಣಿಯಾಗಿದ್ದೇವೆ ಎಂದರು.
ನಮ್ಮ ಹೋರಾಟ ಬಿಜೆಪಿ ಸರ್ಕಾರದಲ್ಲಿ ಹೆಚ್ಚು, ಕಾಂಗ್ರೆಸ್ ಸರ್ಕಾರದಲ್ಲಿ ಕಡಿಮೆ ಎಂದೇನೂ ಇಲ್ಲ. ಬೊಮ್ಮಾಯಿ ಅವರಿಗೆ ನಮ್ಮ ಸಮಾಜದ ಬಗ್ಗೆ ಹೆಮ್ಮೆ ಇದ್ದ ಕಾರಣವೇ ಸ್ಪಂದಿಸಿದ್ದರು. ಕಾಂಗ್ರೆಸ್ ಸರ್ಕಾರದ ಹೊಸದಾಗಿ ಬಂದಿರುವ ಕಾರಣ ಏಕಾಏಕಿ ಹೋರಾಟ ಮಾಡದೇ ಕಾಲಾವಕಾಶ ನೀಡಿದ್ದೇವೆ ಎಂದರು.