ಲೋಕಾ ದಾಳಿಗೊಳಗಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗೆ ಭಡ್ತಿ?
ಬೆಂಗಳೂರು: ಲೋಕಾಯುಕ್ತ ದಾಳಿ ಹಿನ್ನೆಲೆಯಲ್ಲಿ ಅಮಾನತುಗೊಳ್ಳಬೇಕಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗೆ ಹೆಚ್ಚುವರಿ ಭಡ್ತಿ ನೀಡಲು ಸರಕಾರ ಸಿದ್ಧತೆ ನಡೆಸಿದೆ.
ವಾಣಿಜ್ಯ ತೆರಿಗೆ ಇಲಾಖೆ ಬೆಂಗಳೂರು ಜಂಟಿ ಆಯುಕ್ತರ ಮೇಲೆ ಕಳೆದ ತಿಂಗಳಷ್ಟೇ ಲೋಕಾಯುಕ್ತ ದಾಳಿ ನಡೆಸಿದ್ದರು.
ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ಕೂಡ ದಾಖಲಾಗಿತ್ತು. ಅಕ್ರಮ ಆಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಸರಕಾರಕ್ಕೆ ಲೋಕಾಯುಕ್ತ ವರದಿ ನೀಡಿದೆ. ಅದರಂತೆ ಕ್ರಮ ಕೈಗೊಳ್ಳುವ ಮೊದಲು ಅವರಿಗೆ ಸರಕಾರ “ಭಡ್ತಿ’ ನೀಡಲು ಮುಂದಾಗಿದೆ. ಇದು ಸ್ವತಃ ಇಲಾಖೆಯಲ್ಲಿ ಹುಬ್ಬೇರಿಸುವಂತೆ ಮಾಡಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಕಳೆದ ಜುಲೈ 19ರಂದು ವಿವಿಧ ಇಲಾಖೆಗಳ 12 ಅಧಿಕಾರಿಗಳ ವಿರುದ್ಧ ರಾಜ್ಯದ 55 ಕಡೆ ಲೋಕಾಯುಕ್ತರು ದಾಳಿ ನಡೆಸಿ, ಅಂದಾಜು 50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದರು. ಆ 12 ಅಧಿಕಾರಿಗಳಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ ಕೂಡ ಒಬ್ಬರಾಗಿದ್ದು ಅವರಿಂದ ಸುಮಾರು 5.5 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಶಿಫಾರಸು ಕೂಡ ಆಗಿತ್ತು.
ಇದಕ್ಕೂ ಮುನ್ನ ಅಂದರೆ ಜೂನ್‌ನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಇಲಾಖಾ ಮುಂಭಡ್ತಿ ಸಮಿತಿ (ಡಿಪಿಸಿ)ಯು ಅಧಿಕಾರಿಗಳಿಗೆ ಸೇವಾನುಭವ ಮತ್ತಿತರ ಅಂಶಗಳ ಆಧಾರದಲ್ಲಿ ಭಡ್ತಿ ನೀಡುವ ಸಂಬಂಧ ಸರಕಾರಕ್ಕೆ ಶಿಫಾರಸು ಮಾಡಿದೆ. ಆ ಪಟ್ಟಿಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಯ ಹೆಸರು ಕೂಡ ಉಲ್ಲೇಖವಾಗಿತ್ತು. ಇದಾದ ಬಳಿಕ ತಿಂಗಳ ಅಂತರದಲ್ಲಿ ಅವರ ವಿರುದ್ಧ ದಾಳಿ ನಡೆದಿದೆ. ಹಾಗಾಗಿ, ಇಲಾಖೆಯು ಅವರ ಭಡ್ತಿ ಬಗ್ಗೆ ಮರು ಪರಿಶೀಲಿಸುವಂತೆ ಪತ್ರ ಬರೆದಿದೆ. ಈ ನಡುವೆ ಹಣಕಾಸು ಇಲಾಖೆಯು ವಾಣಿಜ್ಯ ತೆರಿಗೆ ಅಧಿಕಾರಿಗೆ ಭಡ್ತಿ ನೀಡುವ ತರಾತುರಿಯಲ್ಲಿದೆ.