ನಿಪ್ಪಾಣಿ: ‘ನಗರದಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ₹ 133 ಕೋಟಿ ಮೊತ್ತದಲ್ಲಿ ನಿರ್ಮಾಣವಾಗುತ್ತಿರುವ ಜಿ +2 ಮಾದರಿಯ 2,052 ಮನೆಗಳ ನಿರ್ಮಾಣ ಕಾಮಗಾರಿಯನ್ನು ಬುಧವಾರ ಶಾಸಕಿ ಶಶಿಕಲಾ ಜೊಲ್ಲೆ ಅಧಿಕಾರಿಗಳೊಂದಿಗೆ ವೀಕ್ಷಿಸಿದರು. ಕಾಮಗಾರಿಯ ಪ್ರಗತಿ ಕಾರ್ಯವನ್ನು ಪರಿಶೀಲಿಸಿ ಸೂಚನೆಗಳನ್ನು ನೀಡಿದರು.
ಬಳಿಕ ಮಾತನಾಡಿದ ಅವರು, ‘ಪ್ರಧಾನಮಂತ್ರಿ ಆವಾಸ ಯೋಜನೆಯ ಅಡಿ ಈಗ ಮತ್ತೆ ₹ 21 ಕೋಟಿ ಮಂಜೂರಾಗಿದೆ. 600 ಮನೆಗಳು ಸಿದ್ಧವಾಗಿದ್ದು, ಅಂತಿಮ ಹಂತದಲ್ಲಿವೆ. ಹೆಚ್ಚಿನ ಮೂಲ ಸೌಕರ್ಯಗಳೊಂದಿಗೆ (ನೀರು, ರಸ್ತೆ, ಚರಂಡಿ, ವಿದ್ಯುತ್) ಕಾಮಗಾರಿಯನ್ನು 2 ತಿಂಗಳಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ದಸರಾ ಹಬ್ಬದೊಳಗೆ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಲಾಗುವುದು. 6 ಲಕ್ಷ ಲೀಟರ್ ನೀರಿನ ಟ್ಯಾಂಕ್ ಸಿದ್ಧಪಡಿಸಿ ಪೈಪ್ ಲೈನ್ ಅಳವಡಿಸಲಾಗುವುದು. ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊಟ್ಟ ಮಾತಿನಂತೆ ಆದಷ್ಟು ಬೇಗ ಮನೆಗಳನ್ನು ನಿರ್ಮಿಸಿ, ಫಲಾನುಭವಿಗಳಿಗೆ ಸೂರು ಕಲ್ಪಿಸಲಾಗುವುದು’ ಎಂದರು.