ನಿಪ್ಪಾಣಿ: ‘ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ(ಬಹುರಾಜ್ಯ)ಯು ವಿವಿಧ ಹಂತಗಳಲ್ಲಿ ನ್ಯಾನೊ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಿದ್ದು, ಇದರಿಂದ ರೈತರು ಕಡಿಮೆ ಕ್ಷೇತ್ರದಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಕಬ್ಬು ಉತ್ಪಾದಿಸಬಹುದು. ಅಲ್ಲದೆ ರೈತರಿಗೆ ಹಾಗೂ ಸದಸ್ಯರಿಗೆ ವಿವಿಧ ನ್ಯಾನೋ ತಂತ್ರಜ್ಞಾನದ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ವೇದಗಂಗಾ ರೈತ ಉತ್ಪಾದಕರ ಒಕ್ಕೂಟ ಹಾಗೂ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಡ್ರೋನ್ ಮೂಲಕ ಔಷಧ ಸಿಂಪಡಣೆ ಸೇವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಾರ್ಖಾನೆಗಳು ಹಾಗೂ ರೈತರ ಅಭಿವೃದ್ಧಿಗೆ ಎಲ್ಲ ಹಂತಗಳಲ್ಲಿ ಶ್ರಮಿಸಲಾಗುತ್ತಿದೆ. ಕಾರ್ಖಾನೆಯ ಆರ್ಥಿಕ ಸ್ಥಿತಿಯು ಸರಿ ಇಲ್ಲದಿದ್ದರೂ, ಕಾರ್ಖಾನೆಯು ಇಥೆನಾಲ್ ಮೂಲಕ ವರ್ಷವಿಡೀ ಆದಾಯದ ಮೂಲವನ್ನು ಸೃಷ್ಟಿಸಿದೆ. ಕಾರ್ಮಿಕ ವೇತನ ಸೇರಿದಂತೆ ನಿಯಮಿತ ವೆಚ್ಚಗಳನ್ನು ಅದರ ಮೂಲಕ ಸಂದಾಯವಾಗುತ್ತವೆ. ಮುಂಬರುವ ಹಂಗಾಮಿನಲ್ಲಿ ಪ್ರತಿದಿನ 8500 ಟನ್ ಕಬ್ಬು ಅರೆಯುವ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ’ ಎಂದರು.
ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ ಮಾತನಾಡಿ, ‘ಇನ್ನು ಮುಂದೆ ಡ್ರೋನ್ ಯಂತ್ರಗಳ ಮೂಲಕ ಔಷಧ ಸಿಂಪಡಿಸುವ ಸೇವೆ ರಿಯಾಯಿತಿ ದರದಲ್ಲಿ ದೊರೆಯಲಿದೆ’ ಎಂದರು.