ಉಡುಪಿ: ಆನ್‌ಲೈನ್ ವಂಚಕರು ವಿವಿಧ ಮಾದರಿಯಲ್ಲಿ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುತ್ತಿದ್ದು, ಭಿನ್ನ-ವಿಭಿನ್ನ ಪ್ರಕರಣಗಳು ವರದಿಯಾಗುತ್ತಿರುವ ನಡುವೆಯೇ ಈಗ ಉದ್ಯಮಿಗಳನ್ನು ಗುರಿಯಾಗಿಸಿ ಕೊಂಡು ವಂಚಕರು ಹೊಸ ಷಡ್ಯಂತ್ರ ಹೆಣೆಯುತ್ತಿದ್ದಾರೆ.
ಉಡುಪಿಯ ಹೊಟೇಲ್‌ವೊಂದರ ಮಾಲಕರಿಗೆ “ನಾಳೆ ಮಧ್ಯಾಹ್ನ 12 ಗಂಟೆಗೆ ಇಂತಿಷ್ಟು ಪ್ಲೇಟ್ ತಿಂಡಿ ಬೇಕು’ ಎಂದು ಕರೆ ಮಾಡಿದ ವ್ಯಕ್ತಿಯೊಬ್ಬರು ದರ ವಿಚಾರಿಸಿದ್ದಾರೆ.
ಬಳಿಕ ಮುಂಗಡ ಹಣ ಎಷ್ಟು ಪಾವತಿಸಬೇಕು ಎಂದು ಸೂಚಿಸಿದ ಮೇರೆಗೆ ಹೊಟೇಲ್ ಮಾಲಕರು 1 ಸಾವಿರ ರೂ. ಹಾಕುವಂತೆ ತಿಳಿಸಿದ್ದರು. ಆದರೆ ಆ ವ್ಯಕ್ತಿ 10 ಸಾವಿರ ರೂ.ಗಳನ್ನು ಹಾಕಿದ್ದ. ಸ್ವಲ್ಪ ಹೊತ್ತಿನ ಬಳಿಕ ಆ ವ್ಯಕ್ತಿ ಕರೆ ಮಾಡಿ ಪ್ರಮಾದವಶತ್ 10 ಸಾವಿರ ರೂ.ಗಳನ್ನು ಹಾಕಿದ್ದೇನೆ. 9 ಸಾವಿರ ರೂ. ವಾಪಸ್ ಹಾಕುವಂತೆ ತಿಳಿಸಿದ್ದಾನೆ. ಆದರೆ ಇದಕ್ಕೆ ಹೊಟೇಲ್ ಮಾಲಕರು ಒಪ್ಪಲಿಲ್ಲ. ನಾಳೆ ಬಂದು ಪಡೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ಇದರಿಂದ ಕೆರಳಿದ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅನುಮಾನಗೊಂಡ ಹೊಟೇಲ್ ಮಾಲಕರು ಆ ಸಂದೇಶವನ್ನು ಮತ್ತೊಂದು ಬಾರಿ ಪರಿಶೀಲಿಸಿದಾಗ ಅದು ಕೇವಲ ಸಂದೇಶವಾಗಿತ್ತೆ ವಿವಾ ಇವರ ಖಾತೆಗೆ ಹಣ ಸಂದಾಯವಾಗಿರಲಿಲ್ಲ.
ಹಿಂದಿ ಭಾಷೆ ಮಾತನಾಡುತ್ತಿದ್ದ
ಕರೆ ಮಾಡಿದಾತ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ. ಮೊದಲಿಗೆ ಯಾರೋ ಸ್ಥಳೀಯ ಕಾರ್ಮಿಕರು ಅಂದುಕೊಂಡಿದ್ದ ಮಾಲಕರಿಗೆ ಅನಂತರ ಆತನ ಮಾತಿನಿಂದ ಇದು ವಂಚಕರ ಕೃತ್ಯ ಎಂಬುವುದು ತಿಳಿಯಿತು. ಅನಂತರ ಆ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದಾಗ ಅದು ಬಿಹಾರ ಲೊಕೇಷನ್ ತೋರಿಸುತ್ತಿತ್ತು.
ಹಿನ್ನೆಲೆ ಪತ್ತೆ ಮಾಡುವರು
ಈ ಹಿಂದೆ ನಡೆದ ಕೆಲವೊಂದು ವಂಚನೆ ಪ್ರಕರಣಗಳಲ್ಲಿ ಬಹುತೇಕ ಎಲ್ಲರಿಗೂ ಒಂದೇ ರೀತಿಯ ಸಂದೇಶಗಳು ಹೋಗುತ್ತಿದ್ದವು. ಆದರೆ ಈಗ ನಾವು ನಡೆಸುವ ಉದ್ಯಮದ ಬಗೆಯನ್ನು ವಂಚಕರು ತಿಳಿದುಕೊಂಡು ಅದಕ್ಕೆ ತಕ್ಕಂತೆ ನಮ್ಮೊಂದಿಗೆ ವ್ಯವಹಾರ ನಡೆಸಿ ಸಂದೇಶ ಕಳುಹಿಸಿ ವಂಚನೆ ನಡೆಸುವ ಅಂಶಗಳು ಬೆಳಕಿಗೆ ಬರುತ್ತಿವೆ. ಹೊಟೇಲ್ ಉದ್ಯಮ, ಪೆಟ್ರೋಲ್ ಬಂಕ್, ಮೆಡಿಕಲ್ ಫಾರ್ಮಸಿ, ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿರುವವರು ಸಹಿತ ವಿವಿಧ ಉದ್ಯಮ ಹಾಗೂ ಉದ್ಯಮಿಗಳನ್ನು ಟಾರ್ಗೆಟ್ ಮಾಡಿಕೊಂಡು ಇಂತಹ ನಕಲಿ ಸಂದೇಶ ಕಳುಹಿಸಿ ವಂಚಿಸುವ ಘಟನೆಗಳೂ ನಡೆಯುತ್ತಿವೆ.