ಬಾಗಲಕೋಟೆ: ಸತತ ಮಳೆ ಸುರಿಯುತ್ತಿರುವುದರಿಂದ ಹೆಸರುಕಾಳಿಗೆ ಹಳದಿ ರೋಗ ಕಾಡುತ್ತಿದ್ದು, ಬೆಲೆ ಕುಸಿದಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಬೆಂಬಲ ಬೆಲೆ ಘೋಷಿಸಿದ್ದರೂ ಖರೀದಿ ಕೇಂದ್ರಗಳು ಇನ್ನೂ ಆರಂಭಗೊಂಡಿಲ್ಲ. ಹೀಗಾಗಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಲೆಗೆ ರೈತರಯ ಹೆಸರುಕಾಳು ಮಾರುವಂತಾಗಿದೆ.

ಬಾಗಲಕೋಟೆ, ಗದಗ, ಯಾದಗಿರಿ, ಧಾರವಾಡ, ಕೊಪ್ಪಳ, ವಿಜಯಪುರ, ರಾಯಚೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಹೆಸರುಕಾಳು ಪ್ರಮುಖ ಬೆಳೆಯಾಗಿದೆ. 2.50 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗಿದೆ.
ಬಾಗಲಕೋಟೆ, ಗದಗ, ಯಾದಗಿರಿ, ಹುಬ್ಬಳ್ಳಿ ಸೇರಿ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಸರುಕಾಳು ಆವಕ ಆಗುತ್ತಿದೆ. ಕ್ವಿಂಟಲ್‌ಗೆ ₹2,004ರಿಂದ ₹8,400ರ ವರೆಗೆ ಬೆಲೆ ಇದೆ. ಸರಾಸರಿ ಬೆಲೆ ₹5,290 ರಿಂದ ₹7,266 ಇದೆ. ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ₹8,682 ದರ ನಿಗದಿ ಪಡಿಸಿದೆ. ಆದರೆ, ಖರೀದಿ ಕೇಂದ್ರ ಇನ್ನೂ ತೆರೆದಿಲ್ಲ ಎಂದು ರೈತರು ದೂರುತ್ತಾರೆ.
‘ಪ್ರತಿ ಎಕರೆಗೆ ನಾಲ್ಕು ಕ್ವಿಂಟಲ್ ಬೆಳೆ ಬರುತ್ತದೆ. ಎಕರೆಗೆ ₹25 ಸಾವಿರ ಖರ್ಚಾಗುತ್ತದೆ. ಬಾಗಲಕೋಟೆ ಎಪಿಎಂಸಿಯಲ್ಲಿ ಹೆಸರುಕಾಳು ಆರಂಭದಲ್ಲಿ ಪ್ರತಿ ಕ್ವಿಂಟಲ್‌ಗೆ ₹8,400 ಮಾರಾಟ ಆಗಿತ್ತು. ಈಗ ₹6 ಸಾವಿರದಿಂದ 8 ಸಾವಿರಕ್ಕೆ ಮಾರಾಟವಾಗುತ್ತಿದೆ. ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ ₹10 ಸಾವಿರ ಬೆಲೆ ಸಿಕ್ಕಿತ್ತು’ ಎಂದು ತೆಗ್ಗಿಯ ರೈತ ಚಂದ್ರಶೇಖರ ಕಾಳನ್ನವರ ತಿಳಿಸಿದರು
Laxmi News 24×7