ದರ್ಶನ್ ಪ್ರಕರಣದಲ್ಲಿ ನಟ ಚಿಕ್ಕಣ್ಣ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ದರ್ಶನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಟ ಚಿಕ್ಕಣ್ಣ ಅವರ ಹೇಳಿಕೆಯೇ ಈಗ ದರ್ಶನ್‌ಗೆ ಕಂಟಕವಾಗಿದ್ದು ಚಿಕ್ಕಣ್ಣ ಅವರಿಗೆ ತಲೆನೋವಾಗಿದೆ. ದರ್ಶನ್ ವಿರುದ್ಧ ಹಲವು ಮಹತ್ವದ ಸಾಕ್ಷಿಗಳನ್ನು ಕಲೆಹಾಕಿರುವ ಪೊಲೀಸರು, ಚಿಕ್ಕಣ್ಣ ವಿಚಾರದಲ್ಲೂ ಚಾಣಾಕ್ಷತೆಯಿಂದ ನಡೆದುಕೊಂಡಿದ್ದಾರೆ.
ಈಗ ಚಿಕ್ಕಣ್ಣ ಅವರ ಹೇಳಿಕೆ ಕೂಡ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್‌ಗೆ ಶಿಕ್ಷೆ ಕೊಡಿಸಲು ಮಹತ್ವದ ಸಾಕ್ಷಿಯಾಗುವ ಸಾಧ್ಯತೆ ಇದೆ.
ಜೂನ್ 8 ರಂದು ನಟ ಚಿಕ್ಕಣ್ಣ ದರ್ಶನ್ ಅವರ ಜೊತೆ ಡಿನ್ನರ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅದೇ ದಿನ ರಾತ್ರಿ ರೇಣುಕಾಸ್ವಾಮಿ ಕೊಲೆಯಾಗಿದೆ ಎಂದು ಪೊಲೀಸರ ವರದಿಯಲ್ಲಿದೆ. ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ನಡೆದ ಪಾರ್ಟಿಯಲ್ಲಿ ಯಾರೆಲ್ಲಾ ಇದ್ರು, ದರ್ಶನ್ ಅವರ ವರ್ತನೆ ಹೇಗಿತ್ತು ಎನ್ನುವ ಎಲ್ಲಾ ಮಹತ್ವದ ಸಂಗತಿಗಳನ್ನು ಚಿಕ್ಕಣ್ಣ ಅವರಿಂದ ಪೊಲೀಸರು ಬಾಯಿ ಬಿಡಿಸಿದ್ದಾರೆ. ಇನ್ನೂ ಮುಖ್ಯವಿಚಾರ ಎಂದರೆ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲು ಮಾಡಿರುವುದು.
ಹೌದು ಸಿಆರ್ ಪಿಸಿ 164ರ ಪ್ರಕಾರ ಚಿಕ್ಕಣ್ಣ ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿರುವ ಕಾರಣ ಅದನ್ನು ನ್ಯಾಯಾಲಯ ಸಾಕ್ಷಿ ಎಂದೇ ಪರಿಗಣಿಸುತ್ತದೆ. ಚಿಕ್ಕಣ್ಣ ಮುಂದಿನ ದಿನಗಳಲ್ಲಿ ತಮ್ಮ ಹೇಳಿಕೆಯನ್ನು ಬದಲಿಸಲು ಯಾವುದೇ ಅವಕಾಶ ಸಿಗುವುದಿಲ್ಲ. ಪ್ರಭಾವಿಗಳು ಪ್ರಕರಣದ ಆರೋಪಿಗಳಾಗಿರುವ ಕಾರಣ ಪೊಲೀಸರು ಎಲ್ಲವನ್ನೂ ಅಂದಾಜಿಸಿಯೇ ಈ ನಡೆ ಅನುಸರಿಸಿದ್ದಾರೆ ಎನ್ನಲಾಗಿದೆ.