ಕಾರ್ಕಳ: ಕಾರ್ಕಳದ ಬೈಲೂರು ಉಮಿಕ್ಕಳ ಬೆಟ್ಟದ ಮೇಲಿನ ಪರಶುರಾಮ ಥೀಂ ಪಾರ್ಕ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.
ನಕಲಿ ಪ್ರತಿಮೆ ಎನ್ನುವ ದೂರಿನ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ಸಂಬಂಧ ಕಾರ್ಕಳ ನಗರ ಠಾಣೆ ಪೊಲೀಸರು ಆ.3ರಂದು ಪರಶುರಾಮ ಪ್ರತಿಮೆ ನಿರ್ಮಿಸಿದ ಕ್ರಿಷ್ ಆರ್ಟ್ ವರ್ಲ್ಡ್ ಮಾಲಕ ಕೃಷ್ಣ ನಾಯ್ಕ ಅವರಿಗೆ ಸೇರಿದ ಬೆಂಗಳೂರಿನ ಕೆಂಗೇರಿ ಬಳಿಯ ಗೋಡೌನ್‌ನಲ್ಲಿ ಸ್ಥಳ ಮಹಜರು ನಡೆಸಿ ಮೂರ್ತಿಯ ಸೊಂಟದ ಮೇಲಿನ ಸುಮಾರು 9 ಟನ್ ತೂಕದ ಪ್ರತಿಮೆಯ ಬಿಡಿಭಾಗಗಳನ್ನು ವಶಕ್ಕೆ ಪಡೆದು ಕಾರ್ಕಳಕ್ಕೆ ತಂದಿದ್ದಾರೆ.
ಪೊಲೀಸರು ಸ್ಥಳ ತನಿಖೆಗೆ ತೆರಳಿದ ಸಂದರ್ಭ ಶಿಲ್ಪಿ ಕೃಷ್ಣ ನಾಯ್ಕ ಅವರು ಫೇಸ್‌ಬುಕ್ ಲೈವ್‌ಗೆ ಬಂದು ಯಾವುದೇ ನೊಟೀಸ್ ನೀಡದೆ ಮೂರ್ತಿಯ ಭಾಗಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಅನ್ಯ ಮತೀಯ ವ್ಯಕ್ತಿಗಳು ಬಿಡಿಭಾಗಗಳನ್ನು ಅಸುರಕ್ಷಿತವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ ಶಿಲ್ಪಿಯ ಮನೆಗೆ ತೆರಳಿದ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮುನಿಯಾಲು ದಬ್ಟಾಳಿಕೆ ನಡೆಸಿ, ಜಾತಿ ಹೆಸರಲ್ಲಿ ಅವಮಾನಿಸಿದ ಬಗ್ಗೆಯೂ ಹೇಳಿ ಕೊಂಡಿದ್ದಾರೆ. ಪೊಲೀಸರೂ ದೌರ್ಜನ್ಯ ಎಸಗಿದ್ದಾರೆಂದು ಶಿಲ್ಪಿ ದೂರಿದ್ದಾರೆ.