ಬೆಂಗಳೂರು: ಎಲ್ ಕೆಜಿಯಿಂದ ಪ್ರಾಥಮಿಕ ಹಂತದವರೆಗೆ ಮಕ್ಕಳಿಗೆ ಆನ್ ಲೈನ್ ತರಗತಿಗಳನ್ನು ನಡೆಸುವಂತಿಲ್ಲ ಎಂದು ಸರ್ಕಾರ ಆದೇಶಿಸಿದ್ದರೂ, ವರ್ತೂರಿನ ವಿಬ್ ಗಯಾರ್ ಶಾಲೆಯಲ್ಲಿ ಪುಟಾಣಿ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಮುಂದುವರಿದಿದೆ. ಸರ್ಕಾರದ ಆದೇಶ ನಮ್ಮ ಕೈಸೇರಿಲ್ಲ ಎಂಬ ಸಬೂಬಿನೊಂದಿಗೆ ತರಗತಿಗಳು ಮುಂದುವರಿದಿದೆ.
ಸಣ್ಣ ಮಕ್ಕಳಿಗೆ ಆನ್ ಲೈನ್ ತರಗತಿ ನಡೆಸುವ ಬಗ್ಗೆ ರಾಜ್ಯದಲ್ಲಿ ಬಹಳಷ್ಟು ದೂರುಗಳು ಕೇಳಿಬಂದಿದ್ದವು. ಹೀಗಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕಳೆದ ಬುಧವಾರ ಸುದ್ದಿಗೋಷ್ಠಿ ನಡೆಸಿ ಪ್ರಾಥಮಿಕ ಹಂತದವರೆಗಿನ ಮಕ್ಕಳಿಗೆ ಆನ್ ಲೈನ್ ತರಗತಿಗಳನ್ನು ನಡೆಸುವಂತಿಲ್ಲ. ಎಲ್ ಕೆಜಿ, ಯುಕೆಜಿ, ಪ್ರಾಥಮಿಕ ಹಂತದವರೆಗೆ ನಡೆಯುತ್ತಿರುವ ಎಲ್ಲಾ ಆನ್ ಲೈನ್ ತರಗತಿಗಳನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಹೇಳಿದ್ದರು.
ಮರುದಿನ ಸರ್ಕಾರದ ಅಧಿಕೃತ ಆದೇಶವೂ ಹೊರಬಿದ್ದಿತ್ತು.
ಆದರೆ ನಗರದ ವರ್ತೂರಿನ ವಿಬ್ ಗಯಾರ್ ಶಾಲೆಯಲ್ಲಿ ಆನ್ ಲೈನ್ ತರಗತಿಗಳು ಮುಂದುವರಿದಿದೆ. ವರ್ಚುವಲ್ ಲರ್ನಿಂಗ್ ಹೆಸರಿನಲ್ಲಿ ಈ ಶಾಲೆ ಆನ್ ಲೈನ್ ತರಗತಿಗಳನ್ನು ಮುಂದುವರಿಸಿದೆ.
ಈ ಸಲುವಾಗಿ ಪಾಲಕರಿಗೆ ಶಾಲೆ ಪತ್ರ ಬರೆದಿದ್ದು, ಆನ್ ಲೈನ್ ತರಗತಿಗಳನ್ನು ನಿಲ್ಲಿಸುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ. ಆದರೆ ಸರ್ಕಾರದ ಯಾವುದೇ ಆದೇಶಪ್ರತಿ ನಮಗೆ ತಲುಪಿಲ್ಲ. ಹಾಗಾಗಿ ಹಿಂದಿನಂತೆಯೇ ತರಗತಿಗಳು ಮುಂದುವರಿಯುತ್ತದೆ ಎಂದಿದೆ.
ಸರ್ಕಾರದ ಆದೇಶವಿದ್ದರೂ, ವರ್ಚುವಲ್ ಲರ್ನಿಂಗ್ ಹೆಸರಲ್ಲಿ ಒತ್ತಡ ಹೇರುತ್ತಿರುವ ಖಾಸಗಿ ಶಾಲೆಯ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.