ಹಾವೇರಿ: ನಿರಂತರ ಮಳೆಯಿಂದಾಗಿ ಇಲ್ಲಿನ ತಹಸೀಲ್ದಾರ್ ಕಚೇರಿ ಮಾಳಿಗೆ ಸೋರುತ್ತಿದ್ದು, ಇದರಿಂದ ರಕ್ಷಿಸಿಕೊಳ್ಳಲು ಇಲ್ಲಿನ ಸಿಬ್ಬಂದಿ ಶುಕ್ರವಾರ ಛತ್ರಿ ಹಿಡಿದುಕೊಂಡೇ ಕೆಲಸ ಮಾಡಬೇಕಾದ ದುಸ್ಥಿತಿ ಎದುರಾಗಿತ್ತು.
ಹೌದು…ಎರಡು ವಾರಗಳಿಂದ ಸುರಿಯುತ್ತಿರುವ ಮಳೆಗೆ ಕಟ್ಟಡದ ನೆಲ ಮಹಡಿವರೆಗೂ ಸೋರಿಕೆ ಉಂಟಾಗಿದೆ. ಇದರಿಂದ ರಕ್ಷಿಸಿಕೊಳ್ಳಲು ಇಲ್ಲಿನ ಸಿಬ್ಬಂದಿ ಛತ್ರಿ ಹಿಡಿದುಕೊಂಡು ಹರಸಾಹಸ ಮಾಡುವಂತಾಗಿದೆ. ಮಹತ್ವದ ದಾಖಲೆಗಳು, ಕಂಪ್ಯೂಟರ್ ರಕ್ಷಿಸಿಕೊಳ್ಳುವುದೇ ಇಲ್ಲಿನ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ.

ಮಳೆ ನೀರು ಸೋರಿಕೆಯಿಂದ ಆದಾಯ, ಜಾತಿ, ಆಸ್ತಿ ಪತ್ರಗಳು ಹಾಗೂ ಕಚೇರಿ ಪ್ರತಿಗಳು ಒದ್ದೆಯಾಗಿದ್ದು, ಸಿಬ್ಬಂದಿ ಅವುಗಳನ್ನು ಒಣಗಿಸಲು ಹಾಕುತ್ತಿದ್ದಾರೆ. ಹದಿನೈದು ವರ್ಷಗಳ ಹಿಂದೆ ಕಳಪೆ ಕಾಮಗಾರಿ ಹಾಗೂ ಅವೈಜ್ಞಾನಿಕವಾಗಿ ಸೋಲಾರ್ ಪೆನಲ್ ಅಳವಡಿಸಿದ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಈ ಕಟ್ಟಡ ಸೋರುತ್ತಿದೆ. ಪ್ರತಿ ವರ್ಷ ಸೋರುತ್ತಿದ್ದರೂ ಇದಕ್ಕೆ ಮುಕ್ತಿ ಕೊಡಲು ಯಾರೊಬ್ಬರೂ ಮುಂದಾಗಿಲ್ಲ ಎಂಬುದು ವಿಪರ್ಯಾಸ.
ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಕಷ್ಟ ನೋಡಿ ಸಾರ್ವಜನಿಕರು ಅಯ್ಯೋ ಪಾಪ ಎನ್ನುತ್ತಿದ್ದಾರೆ. ಮೊನ್ನೆಯಷ್ಟೇ ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಕೂಡಲೇ ದುರಸ್ತಿ ಮಾಡಿಸುವಂತೆ ಸೂಚಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ.
Laxmi News 24×7