ಹೊಳೆನರಸೀಪುರ: ತಾಲ್ಲೂಕಿನ ಹರದನಹಳ್ಳಿಯ ಶಿವನ ದೇವಾಲಯದಲ್ಲಿ ಬುಧವಾರ ಬೆಳಗಿನ ಜಾವ ಪೂಜೆ ಸಲ್ಲಿಸಿ ಬರುವಾಗ ಮೆಟ್ಟಿಲಿನ ಮೇಲೆ ಕಾಲು ಜಾರಿಬಿದ್ದ ಶಾಸಕ ಎಚ್.ಡಿ. ರೇವಣ್ಣ ಅವರ ಬಲಪಕ್ಕೆಯ 6 ನೇ ಮೂಳೆಯಲ್ಲಿ ಸಣ್ಣ ಬಿರುಕು ಬಿಟ್ಟಿದೆ. 7ನೇ ಮೂಳೆಗೆ ಹೆಚ್ಚು ಹಾನಿಯಾಗಿದೆ.
ಅವರಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಧನಶೇಖರ್, ಮೂಳೆ ತಜ್ಞರಾದ ಡಾ.ಜೆ.ಕೆ. ದಿನೇಶ್, ಡಾ. ದಿನೇಶ್ ಕುಮಾರ್ ಹಾಗೂ ಡಾ. ಸತ್ಯಪ್ರಕಾಶ್, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರು.
‘ಗಾಬರಿ ಪಡಬೇಕಿಲ್ಲ. 3 ವಾರಗಳ ವಿಶ್ರಾಂತಿಯಿಂದ ಸಂಪೂರ್ಣ ಗುಣಮುಖರಾಗುತ್ತಾರೆ. ಮೂಳೆಗಳು ವಯಸ್ಸಿಗೆ ತಕ್ಕಂತೆ ದೃಢವಾಗಿವೆ’ ಎಂದು ವೈದ್ಯರು ತಿಳಿಸಿದರು.
ರೇವಣ್ಣ ಕೆಲಕಾಲ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆದು, ಬೆಂಗಳೂರಿನ ಮನೆಯಲ್ಲಿ ವಿಶ್ರಾಂತಿ ಪಡೆಯುವುದಾಗಿ ಹೇಳಿ ತೆರಳಿದರು. ಆಷಾಢ ಏಕಾದಶಿಯ ಪ್ರಯುಕ್ತ ಹರದನಹಳ್ಳಿಯಿಂದ ಬಂದಿದ್ದ ಅವರು ಮೊದಲಿಗೆ ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲೂ ಪೂಜೆ ಸಲ್ಲಿಸಿದ್ದರು.
Laxmi News 24×7