Breaking News

ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿಮಾಡಲು ವಿಫಲವಾಗಿರುವ ಕೇಂದ್ರ ಸರ್ಕಾರವನ್ನು ಸುಪ್ರಿಂ ಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

Spread the love

ವದೆಹಲಿ: ಅಂಗವಿಕಲ ವ್ಯಕ್ತಿಗಳ ಕಾಯ್ದೆಯ (ಪಿಡಬ್ಲ್ಯುಡಿ) ಪರಿಣಾಮಕಾರಿಯಾಗಿ ಜಾರಿ ಮತ್ತು ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿಮಾಡಲು ವಿಫಲವಾಗಿರುವ ಕೇಂದ್ರ ಸರ್ಕಾರವನ್ನು ಸುಪ್ರಿಂ ಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

2009ರಲ್ಲಿ ನಾಗರಿಕ ಸೇವಾ ಪರೀಕ್ಷೆ ತೇರ್ಗಡೆಯಾಗಿರುವ, ಶೇ 100ರಷ್ಟು ಅಂಧತ್ವ ಹೊಂದಿರುವ ಅಭ್ಯರ್ಥಿಯನ್ನು ಮೂರು ತಿಂಗಳ ಒಳಗಾಗಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತೆಯೂ ಸರ್ಕಾರಕ್ಕೆ ಆದೇಶಿಸಿತು.

 

1995ರ ಪಿಡಬ್ಲ್ಯುಡಿ ಕಾಯ್ದೆಯ ನಿಬಂಧನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಸರ್ಕಾರದ ಕಡೆಯಿಂದ ‘ಎದ್ದು ಕಾಣುವಂತಹ ಕರ್ತವ್ಯಲೋಪ’ ಉಂಟಾಗಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್‌ ಎಸ್‌. ಓಕಾ ಮತ್ತು ಪಂಕಜ್‌ ಮಿತ್ತಲ್‌ ಅವರಿದ್ದ ಪೀಠ ಹೇಳಿತು.

‘ದುರದೃಷ್ಟವಶಾತ್, ಈ ಪ್ರಕರಣದಲ್ಲಿ ಅಂಗವಿಕಲ ವ್ಯಕ್ತಿಗಳ ಪ್ರಯೋಜನಕ್ಕಾಗಿ ಇರುವ ಕಾನೂನುಗಳನ್ನು ಜಾರಿಗೊಳಿಸುವ ಉದ್ದೇಶವನ್ನೇ ವ್ಯರ್ಥಗೊಳಿಸುವ ನಿಲುವನ್ನು ಮೇಲ್ಮನವಿದಾರರು ತೆಗೆದುಕೊಂಡಿದ್ದಾರೆ. ಮೇಲ್ಮನವಿದಾರರು 1995ರ ಪಿಡಬ್ಲ್ಯುಡಿ ಕಾಯ್ದೆಯನ್ನು (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿವೆ) ಅದರ ನೈಜರೂಪದಲ್ಲಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದಲ್ಲಿ, ಪ್ರತಿವಾದಿಯು (ಅಂಧ ಅಭ್ಯರ್ಥಿ) ನ್ಯಾಯಕ್ಕಾಗಿ ಅಲೆದಾಡುವ ಪ್ರಮೇಯವೇ ಉಂಟಾಗುತ್ತಿರಲಿಲ್ಲ’ ಎಂದಿತು.

ಪೂರ್ಣ ಅಂಧತ್ವ ಹೊಂದಿರುವ ಪಂಕಜ್‌ ಕುಮಾರ್‌ ಶ್ರೀವಾಸ್ತವ ಎಂಬವರು 2009ರಲ್ಲಿ ನಾಗರಿಕ ಸೇವೆ ಪರೀಕ್ಷೆ ಬರೆದಿದ್ದರು. ಈ ವೇಳೆ ಅವರು ತಮ್ಮ ನಾಲ್ಕು ಆದ್ಯತೆಗಳನ್ನು ಕ್ರಮವಾಗಿ ಐಎಎಸ್‌, ಐಆರ್‌ಎಸ್‌-ಐಟಿ, ಐಆರ್‌ಪಿಎಸ್‌ ಮತ್ತು ಐಆರ್‌ಎಸ್‌-ಸಿಆಯಂಡ್‌ಇಗೆ ನೀಡಿದ್ದರು. ಪರೀಕ್ಷೆ ಹಾಗೂ ಸಂದರ್ಶನದಲ್ಲಿ ತೇರ್ಗಡೆಯಾದರೂ ಅವರಿಗೆ ನೇಮಕಾತಿ ನಿರಾಕರಿಸಲಾಗಿತ್ತು.

ಇದರಿಂದ ಅವರು ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೊರೆಹೋಗಿದ್ದರು. ಶ್ರೀವಾಸ್ತವ ಅವರನ್ನು ನೇಮಕಾತಿಗೆ ಪರಿಗಣಿಸುವಂತೆ ಸಿಎಟಿ, ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಸಿಎಟಿ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್‌ ತಳ್ಳಿಹಾಕಿತ್ತು. ಇದರಿಂದ ಸರ್ಕಾರ, ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

‘ಆದೇಶ ಹೊರಬಿದ್ದ ದಿನದಿಂದ (ಜುಲೈ 9) ಮೂರು ತಿಂಗಳ ಒಳಗಾಗಿ ನೇಮಕಾತಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪೀಠವು ಸರ್ಕಾರಕ್ಕೆ ಆದೇಶಿಸಿತು. ನೇಮಕಗೊಂಡವರು ಬಾಕಿ ವೇತನ ಮತ್ತು ಸೇವಾ ಹಿರಿತನದ ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ ಎಂದು ಪೀಠವು ಇದೇ ವೇಳೆ ಸ್ಪಷ್ಟಪಡಿಸಿದೆ.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ