ನವಲಗುಂದ: ಮನುಷ್ಯ ಮನುಷ್ಯರನ್ನು ದ್ವೇಷಿಸುವ ಇಂದಿನ ದಿನಮಾನದಲ್ಲಿ ಪಂಜಾಗಳನ್ನು ತಂದು ಮಠದ ಗವಿಯಲ್ಲಿಟ್ಟು, ಗದ್ದುಗೆಯ ಮೇಲೆ ಬೈಬಲ್ ಇಟ್ಟು ಪೂಜೆ ಮಾಡುವ ಮೂಲಕ ಹಿಂದೂ-ಮುಸ್ಲಿಂ, ಕ್ರೈಸ್ತರಲ್ಲಿ ಸಾಮರಸ್ಯ ಮೂಡಿಸುತ್ತಿರುವ ನವಿಲುಗುಂದ ಶ್ರೀ ಅಜಾತನಾಗಲಿಂಗಸ್ವಾಮಿ ಮಠ ಈ ನಾಡಿನಲ್ಲಿ ಬೇರೆಡೆ ಇಲ್ಲ.
ಹೌದು ಪಟ್ಟಣದ ಶ್ರೀ ಅಜಾತ ನಾಗಲಿಂಗ ಸ್ವಾಮಿ ಮಠದಲ್ಲಿ ಬೈಬಲ್‍ಗೆ ಮಳೆ ಜಡಿದು ರಂಧ್ರ ಮಾಡಿ, ರಂಧ್ರ ಮುಚ್ಚಿದ ಮೇಲೆ ಮತ್ತೆ ಹುಟ್ಟಿ ಬರುವೇನೆಂದು ಹೇಳಿದ್ದ ಶ್ರೀಗಳು ಪವಾಡಗಳ ಮಹಿಮಾ ಪುರುಷರಾಗಿದ್ದಾರೆ. ಅವರು ಮಾಡಿದ ಹಲವಾರು ಲೀಲೆಗಳು ಭಕ್ತರು ಮನದಲ್ಲಿ ಇನ್ನೂ ಬೇರೂರಿವೆ. ಪಂಜಾಗಳನ್ನು ತಂದು ಮಠದ ಗವಿಯಲ್ಲಿಟ್ಟಿದ್ದು, ನಾರು ಹುಣ್ಣಿಗೆ ಕುಲುಮೆ ಚಿಕಿತ್ಸೆ ನೀಡಿದ್ದು ಪವಾಡ.
ಶ್ರೀ ಅಜಾತ ನಾಗಲಿಂಗ ಸ್ವಾಮಿಗಳು ಸಂಚರಿಸುತ್ತ ನವಲಗುಂದಕ್ಕೆ ಆಗಮಿಸಿದಾಗ ಅಜ್ಜನವರು ಇಲ್ಲಿಯ ಮೌನೇಶ ಗುಡಿಯಲ್ಲಿ ಜ್ವರಪೀಡಿತರಾಗಿ ಮಲಗಿದಾಗ ಆರೈಕೆ ಮಾಡಲು ಬಂದ ಸಮಗಾರ ಭೀಮವ್ವನ ಎದೆ ಹಾಲನ್ನು ಕುಡಿದು ಮಹಿಮೆ ಮೆರೆದರು. ಮಯೂರಗಿರಿಯಲ್ಲಿ ವಾಸಿಯಾಗಿ ಬರುವ ಭಕ್ತರ ಭವರೋಗ ನಿವಾರಣೆ ಮಾಡುತ್ತ, ಪರಮಹಂಸ ಸ್ವರೂಪನಾಗಿ, ಕಷ್ಟಅಂತ ಬಂದವರಿಗೆ ಕಾಮಧೇನುವಾಗಿ ವರವ ನೀಡುತ್ತಾ ಪವಾಡ ಮಹಿಮಾಪುರುಷನಾಗಿ ನೆಲೆಸಿದ್ದಾನೆ.
ಸಿದ್ಡಾರೂಢ ಶ್ರೀ, ಮಡಿವಾಳೇಶ್ವರ, ಹೊಸಳ್ಳಿ ಬೂದೀಶ್ವರ, ಶಿಶುನಾಳ ಶರೀಫ್ ಶಿವಯೋಗಿಗಳ ಸಮಕಾಲೀನರಲ್ಲಿ ಬಬ್ಬರು ನಾಗಲಿಂಗಶ್ರೀಗಳು.
ರಾಯಚೂರು ಜಿಲ್ಲೆಯ ಜಾವಳಗೇರಿ ಗ್ರಾಮದ ಮೌನಾಚಾರ್ಯ ಹಾಗೂ ನಾಗಮ್ಮ ದಂಪತಿ ಮಗನಾಗಿ ಬೆಳೆದು ಬಾಲ್ಯದಲ್ಲಿಯೇ ವೈರಾಗ್ಯ ಹೊಂದಿ ಸನ್ಯಾಸಿ ದೀಕ್ಷೆ ಪಡೆದು, ಲೋಕದ ಕಲ್ಯಾಣಕ್ಕಾಗಿ ಮನೆ ಬಿಟ್ಟು ಬಂದು ನವಿಲುಗುಂದದಲ್ಲಿ ನೆಲೆಸಿದರು.
ಈಗಿನ ಪೀಠಾಧಿಪತಿಗಳಾದ ವೀರೇಂದ್ರ ಶ್ರೀಗಳು ಎಂ.ಎ ಸಂಸ್ಕೃತ ಹಾಗೂ ಯೋಗ ಪದವೀಧರರಾಗಿದ್ದು ಬಿಡುವಿನ ವೇಳೆಯಲ್ಲಿ ಶಾಲಾ ಮಕ್ಕಳಿಗೆ ಸಂಸ್ಕೃತ ಕಲಿಸುತ್ತಾರೆ. ಪ್ರೌಢಶಾಲೆ ಮತ್ತು ಐಟಿಐ ಕಾಲೇಜನ್ನು ನಡೆಸುತ್ತಿದ್ದು ಪ್ರಗತಿಪಥದಲ್ಲಿದ್ದು, ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣವಾಗಿವೆ.