ಕಾಗವಾಡ: ‘ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮೀಸಲಾತಿ ಪಡೆಯುವುದಕ್ಕಾಗಿ ನಾನು ಯಾವ ಹುದ್ದೆ ತ್ಯಜಿಸಲೂ ಸಿದ್ಧ’ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದರು.
ಸಮೀಪದ ಉಗಾರ ಖುರ್ದ್ ಗ್ರಾಮದಲ್ಲಿ ಸೋಮವಾರ ನಡೆದ ಮೀಸಲಾತಿಗಾಗಿ ಹೋರಾಟ ಪೂರ್ವಭಾವಿ ಸಭೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ಮೀಸಲಾತಿ ಪಡೆಯಲು ಪಂಚಮಸಾಲಿ ಸಮುದಾಯದ ಎಲ್ಲ ಶಾಸಕರು ಪಕ್ಷಾತೀತವಾಗಿ ರಾಜೀನಾಮೆ ನೀಡಿದರೆ, ಯಾವುದೇ ಸರ್ಕಾರವಿದ್ದರೂ ಮಂಡಿ ಊರಬೇಕಾಗುತ್ತದೆ.
ಮೀಸಲಾತಿಗಾಗಿ ನಾನು ಎಂಥ ತ್ಯಾಗವನ್ನೂ ಮಾಡಲು ಸಿದ್ಧವಿದ್ದೇನೆ’ ಎಂದರು.
ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ‘ನಾವು ಅನ್ಯ ಸಮುದಾಯಗಳ ವಿರೋಧಿಗಳಲ್ಲ. ಶೈಕ್ಷಣಿಕವಾಗಿ ಹಿಂದುಳಿದ ನಮ್ಮ ಸಮುದಾಯಕ್ಕೂ ಮೀಸಲಾತಿ ನೀಡಬೇಕು ಎಂಬುದು ನಮ್ಮ ಬೇಡಿಕೆ. ಮೀಸಲಾತಿ ವಿಚಾರವಾಗಿ ವಿಧಾನಸಭೆ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಕೋರಲು, ರಾಜು ಕಾಗೆ ಅವರ ಮನೆಗೆ ಆಗಮಿಸಿ ಮನವಿ ನೀಡುವ ಅಭಿಯಾನ ಹಮ್ಮಿಕೊಂಡಿದ್ದೇವೆ’ ಎಂದು ಹೇಳಿದರು.
ಆರ್.ಕೆ.ಪಾಟೀಲ, ನಿಂಗಪ್ಪ ಪೀರೋಜೆ, ಮೃಣಾಲ್ ಹೆಬ್ಬಾಳಕರ ಇತರರಿದ್ದರು.