ನವದೆಹಲಿ/ಬೆಂಗಳೂರು, ಜೂನ್ 28: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಾಜ್ಯ ಸಂಸದರೊಂದಿಗೆ ನವದೆಹಲಿಯಲ್ಲಿ (Delhi) ಶುಕ್ರವಾರ ಸಭೆ ನಡೆಸಿದರು.
ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ, ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ರಾಜ್ಯಕ್ಕೆ ಬರಬೇಕಿರುವ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ.
ರಾಜ್ಯದ ಯೋಜನೆಗಳನ್ನು ಸಂಸತ್ ಸದಸ್ಯರ ಗಮನಕ್ಕೆ ತರಲಾಗಿದೆ. ಪಕ್ಷಭೇದ ಮರೆತು ಕರ್ನಾಟಕದ ಒಳಿತಿಗಾಗಿ ನಿಲ್ಲುವ ಪ್ರಯತ್ನ ಮಾಡುತ್ತೇವೆ ಅಂತ ಹೇಳಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಯೋಜನೆಗಳನ್ನು ಜಾರಿ ಮಾಡುವಂತೆ ಕೇಂದ್ರದ ಮೇಲೆ ಒತ್ತಡಹಾಕಿ ಮಂಜೂರು ಮಾಡಿಸಲು ಹೇಳಿದ್ದೇವೆ. ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡಬಾರದು.
ಪಕ್ಷ ಭೇದ ಮರೆತು ಪ್ರಯತ್ನ ಮಾಡುತ್ತಿದ್ದೇವೆ. ಕೇಂದ್ರ ಮಂತ್ರಿಗಳು ಉತ್ತರದ ರೂಪದಲ್ಲಿ ಪತ್ರ ಕೊಟ್ಟಿದ್ದಾರೆ. ಬಿಜೆಪಿ ನಿಲುವನ್ನು ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ಅನೇಕ ಸುಳ್ಳುಗಳು ಇವೆ. ಮಹದಾಯಿ ಕುಡಿಯುವ ನೀರಿನ ಯೋಜನೆ ನ್ಯಾಯಾಲಯದಲ್ಲಿ ಇದೆ ಅಂತ ಹೇಳಿದ್ದಾರೆ. ಗೆಜೆಟ್ ನೊಟಿಫಿಕೇಷನ್ ಆಗಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಅನುಮತಿ ಬೇಕಿದೆ. ವಿಷಯ ಕೇಂದ್ರ ಸರಕಾರದ ಮುಂದೆ ಇದೆ. ನ್ಯಾಯಾಲಯದಲ್ಲಿ ಕೇಸ್ ಇದೆ ಎಂದು ನೆಪ ಹೇಳಿದ್ದಾರೆ ಎಂದು ವಾಗ್ದಾಳಿ ಮಾಡಿದರು.