ನವದೆಹಲಿ: ಯುಜಿಸಿ-ನೆಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಪ್ರತಿ ದಿನ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದು, ಇದು ಯಾವ ರೀತಿಯ ಪರೀಕ್ಷಾ ಪೇ ಚರ್ಚಾ?’ ಎಂದು ಕೇಳಿದ್ದಾರೆ.
ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ‘ಪ್ರತಿ ವರ್ಷ ‘ಪರೀಕ್ಷಾ ಪೇ ಚರ್ಚಾ’ ಎಂಬ ಹಾಸ್ಯಾಸ್ಪದ ಕಾರ್ಯಕ್ರಮವನ್ನು ನಡೆಸುತ್ತಿದ್ದರೂ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಂಚನೆಯಿಲ್ಲದೆ ಯಾವುದೇ ಪರೀಕ್ಷೆಯನ್ನು ನಡೆಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ’ ಎಂದು ಕುಟುಕಿದ್ದಾರೆ.
‘ಮೋದಿ ಸರ್ಕಾರವು ದೇಶದ ಶಿಕ್ಷಣ ಮತ್ತು ನೇಮಕಾತಿ ವ್ಯವಸ್ಥೆಯನ್ನು ಹೇಗೆ ಹಾಳು ಮಾಡಿದೆ ನೋಡಿ. ನೀಟ್ ಸೇರಿದಂತೆ ಯುಜಿಸಿ-ನೆಟ್, ಸಿಯುಇಟಿ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಮತ್ತು ವಂಚನೆ ನಡೆದ ವಿಷಯಗಳು ಇದೀಗ ಬಯಲಾಗಿವೆ. ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸಂಪೂರ್ಣ ನಿಷ್ಕ್ರೀಯವಾಗಿದೆ’ ಎಂದು ಕಿಡಿಕಾರಿದರು.