ಹುಬ್ಬಳ್ಳಿ: ಸಾರ್ವಜನಿಕರಿಗೆ ತಕ್ಷಣದ ಆರೋಗ್ಯ ಸೇವೆ ಒದಗಿಸಲು ಅಭಿವೃದ್ಧಿಪಡಿಸಲಾದ ಇಲ್ಲಿನ ಹೊಸ ಮೇದಾರ ಓಣಿಯ ನಗರ ಚಿಕಿತ್ಸಾಲಯ ಇನ್ನೂ ಕಾರ್ಯಾರಂಭ ಮಾಡಿಲ್ಲ.
ಸ್ಮಾರ್ಟ್ ಸಿಟಿ ಯೋಜನೆಯಡಿ ₹4 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಉದ್ಘಾಟನೆಯಾಗಿ ವರ್ಷವಾಗಿದೆ.
ಆದರೆ, ಈವರೆಗೆ ಇಲ್ಲಿ ಆರೋಗ್ಯ ಸೇವೆ ಲಭ್ಯವಾಗಿಲ್ಲ. ಇದರಿಂದ ಸುತ್ತಲಿನ ವ್ಯಾಪಾರಸ್ಥರು, ಗ್ರಾಹಕರು, ನಿವಾಸಿಗಳು ಚಿಕ್ಕ-ಪುಟ್ಟ ಚಿಕಿತ್ಸೆಗೂ ಕಿಮ್ಸ್‌ಗೆ ಹೋಗಬೇಕು ಇಲ್ಲವೇ ಖಾಸಗಿ ಆಸ್ಪತ್ರೆಗೆ ತೆರಳಿ ಹೆಚ್ಚು ಹಣ ನೀಡಬೇಕು.
‘ಬಹಳ ವರ್ಷಗಳಿಂದ ಇಲ್ಲಿ ಆಸ್ಪತ್ರೆ ಇತ್ತು. ಸುತ್ತಲಿನವರು ಅಗತ್ಯ ಚಿಕಿತ್ಸೆಗೆ ಈ ಆಸ್ಪತ್ರೆಗೆ ಹೋಗುತ್ತಿದ್ದರು. ಆಸ್ಪತ್ರೆ ಕಟ್ಟಡ ಇದ್ದ ವಾಣಿಜ್ಯ ಮಳಿಗೆಗಳ ಸಾಲು ಕುಸಿದ ಕಾರಣಕ್ಕೆ ಆಸ್ಪತ್ರೆ ಕೆಡವಿದರು. ಕಟ್ಟಡ ಕಡೆವಲೂ ವರ್ಷಗಟ್ಟಲೇ ಸಮಯ ಬೇಕಾಯಿತು. ಹೊಸ ಕಟ್ಟಡ ನಿರ್ಮಿಸಲೂ ವರ್ಷಗಟ್ಟಲೆ ಸಮಯ ತೆಗೆದುಕೊಂಡರು’ ಎಂದು ಸ್ಥಳೀಯರಾದ ಜಯದೇವಯ್ಯ ಹಿರೇಮಠ ತಿಳಿಸಿದರು.
‘ಇಲ್ಲಿದ್ದ ಆಸ್ಪತ್ರೆಯನ್ನು ರಾಜನಗರಕ್ಕೆ ಸ್ಥಳಾಂತರಿಸಲಾಗಿದೆ. ಹೊಸ ಕಟ್ಟಡ ಪೂರ್ಣಗೊಂಡು, ಉದ್ಘಾಟನೆ ಮಾಡಿದರೂ, ಆಸ್ಪತ್ರೆ ಕಾರ್ಯಾರಂಭ ಮಾಡಿಲ್ಲ. ರಾಜನಗರದಲ್ಲಿರುವ ಆಸ್ಪತ್ರೆಯನ್ನು ಸ್ಥಳಾಂತರಿಸುವುದಾಗಿ ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಸುತ್ತಲಿನ ವ್ಯಾಪಾರಸ್ಥರು ಸಹ ಈ ಬಗ್ಗೆ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದ್ದಾರೆ. ಯಾವಾಗ ಆಸ್ಪತ್ರೆ ತೆರೆಯುವುದೋ ಎಂದು ಕಾಯುತ್ತಿದ್ದೇವೆ’ ಎಂದು ಹೇಳಿದರು.