ಬೆಳಗಾವಿ: ಜನ್ಮತಃವಾಗಿ ‘ಕರೋನರಿ ಕ್ಯಾಮೆರಾಲ ಫಿಸ್ತುಲಾ’ ಎಂಬ ಹೃದ್ರೋಗದಿಂದ ಬಳಲುತ್ತಿದ್ದ 20 ತಿಂಗಳ ಮಗುವಿಗೆ ಮರುಜನ್ಮ ನೀಡುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದ ಹೃದ್ರೋಗ ತಜ್ಞರು ಯಶಸ್ವಿಯಾಗಿದ್ದಾರೆ.
ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಮೂಲದ 20 ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಸುಮಾರು 2,000 ಮಕ್ಕಳಲ್ಲಿ ಒಬ್ಬರಿಗೆ ಇಂಥ ಕಾಯಿಲೆ ಕಂಡುಬರುತ್ತದೆ. ಮಗುವಿಗೆ ಮೇಲಿಂದ ಮೇಲೆ ಶೀತ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ ಮತ್ತು ಶಾರೀರಿಕ ಬೆಳವಣಿಗೆಯಲ್ಲಿ ಕುಂಠಿತ ಕಂಡುಬರುತ್ತಿತ್ತು. ಅತ್ಯಂತ ಜಟಿಲ ಹಾಗೂ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂಬುದನ್ನು ವೈದ್ಯರು ಅರಿತರು.
ಹಿರಿಯ ಮಕ್ಕಳ ಹೃದ್ರೋಗ ತಜ್ಞ ಡಾ.ವೀರೇಶ್ ಮಾನ್ವಿ, ಮಕ್ಕಳ ಹೃದಯ ಶಸ್ತ್ರಚಿಕಿತ್ಸಕ ಡಾ.ಗಣಂಜಯ್ ಸಾಳ್ವೆ, ಅರಿವಳಿಕೆ ತಜ್ಞ ಡಾ.ಆನಂದ ವಾಘರಾಳಿ, ಆನಂದ ಘೋರ್ಪಡೆ, ಅಭಯ ಸಂಸುದ್ದಿ, ಸಾವಿತ್ರಿ ಪಾಟೀಲ, ಇಂಟೆನ್ಸಿವಿಸ್ಟ್ ಡಾ.ನಿಧಿ ಮಾನ್ವಿ ಅವರ ತಂಡ ಈ ಚಿಕಿತ್ಸೆ ಯಶಸ್ವಿಗೊಳಿಸಿತು.