ಬೆಂಗಳೂರು: ಆನ್ ಲೈನ್ ವಸ್ತುಗಳು ಡೆಲಿವರಿ ಮಾಡಿದ ನಂತರ ತಾವು ಆರ್ಡರ್ ಮಾಡಿದ ವಸ್ತುವಿನ ಬದಲು ಬೇರೇನೊ ಬಂದಿರುವುದು ಸಾಮಾನ್ಯವಾಗಿದ್ದು, ಈಗಾಗಲೇ ಇಂತಹ ಹಲವು ಘಟನೆ ನಡೆದಿತ್ತು. ಆದರೆ ಈ ಬಾರಿ ಅಮೆಜಾನ್ ಕಳುಹಿಸಿದ್ದ ವಸ್ತು ಕಂಡು ಬೆಂಗಳೂರಿನ ಮಹಿಳೆಯೊಬ್ಬರು ಕಂಗಾಲಾಗಿ ಹೋದ ಘಟನೆ ನಡೆದಿದೆ.
ಉದ್ಯಾನನಗರಿಯ ಸರ್ಜಾಪುರ್ ರಸ್ತೆ ನಿವಾಸಿಯಾಗಿರುವ ಮಹಿಳೆ ಅಮೆಜಾನ್ ನಲ್ಲಿ Xbox ಕಂಟ್ರೋಲರ್ ಅನ್ನು ಆರ್ಡರ್ ಮಾಡಿದ್ದರು. ಕೆಲವು ದಿನಗಳ ನಂತರ ಅಮೆಜಾನ್ ನಿಂದ ಪಾರ್ಸೆಲ್ ಡೆಲಿವರಿ ಬಂದಿತ್ತು. Xbox ಕಂಟ್ರೋಲರ್ ಬಂದಿದೆ ಎಂದು ಮಹಿಳೆ ಪಾರ್ಸೆಲ್ ಓಪನ್ ಮಾಡಿದಾಗ ಬೊಬ್ಬೆ ಹೊಡೆದು ಹಿಂದೆ ಸರಿದುಬಿಟ್ಟಿದ್ದರು! ಯಾಕೆಂದರೆ ಪಾರ್ಸೆಲ್ ನಲ್ಲಿ ವಿಷಕಾರಿ ಹಾವು ಸುರುಳಿ ಸುತ್ತಿಕೊಂಡಿತ್ತು.
ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಣ ಹಾವು ಗಮ್ ಟೇಪ್ ಗೆ ಸಿಕ್ಕಿಹಾಕಿಕೊಂಡು ಹೊರಬರಲು ಪ್ರಯತ್ನಪಡುತ್ತಿರುವುದು ವಿಡಿಯೋದಲ್ಲಿದೆ. ಘಟನೆ ಬಗ್ಗೆ ಮಹಿಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಇದು ವೈರಲ್ ಆಗಿದೆ.