ನವದೆಹಲಿ: ಬೆಳಗಾವಿ ಜಿಲ್ಲೆಯಗುತ್ತಿ ಬಸವಣ್ಣ ಏತ ನೀರಾವರಿ ಕುಡಿಯುವನೀರಿನ ಯೋಜನೆಗೆ ಬಳಕೆಯಾಗುವ ಅರಣ್ಯಕ್ಕೆ ಪರ್ಯಾಯವಾಗಿ ಪರಿಹಾರಾತ್ಮಕ ಅರಣ್ಯೀಕರಣ ಮಾಡಲು ಒತ್ತುವರಿಯಾಗಿರುವ 100 ಹೆಕ್ಟೇರ್ ಜಾಗ ಗುರುತಿಸಿ ಶಿಫಾರಸು ಮಾಡಿರುವುದಕ್ಕೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಅವರಿಗೆ ಜೂನ್ 10ರಂದು ಪತ್ರ ಬರೆದಿರುವ ಸಚಿವಾಲಯದ ಸಹಾಯಕ ಮಹಾನಿರ್ದೇಶಕ ಧೀರಜ್ ಮಿತ್ತಲ್, ‘ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಒತ್ತುವರಿ ಇಲ್ಲದ ಜಾಗಗಳನ್ನು ನೀಡಬೇಕಿದೆ. ರಾಜ್ಯ ಸರ್ಕಾರದ ಪ್ರಸ್ತಾವದ ಹಿನ್ನೆಲೆಯಲ್ಲಿ ಸಚಿವಾಲಯದ ಉನ್ನತ ಅಧಿಕಾರಿಗಳ ತಂಡವು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ. 100 ಹೆಕ್ಟೇರ್‌ಗಳಷ್ಟು ಒತ್ತುವರಿ ಜಾಗವನ್ನು ಗುರುತಿಸಿರುವುದು ಗೊತ್ತಾಗಿದೆ. ಇದೊಂದು ಗಂಭೀರ ಲೋಪ’ ಎಂದು ಹೇಳಿದ್ದಾರೆ.