ಬೆಳಗಾವಿ: ಇಂಧನ ತೈಲಗಳ ತೆರಿಗೆ ದರ ಏರಿಕೆ ಮಾಡಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ನಗರದಲ್ಲಿ ಸೋಮವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿನೂತನ ಪ್ರತಿಭಟನೆ ಮಾಡಿದರು. ಎತ್ತುಗಳಿಗೆ ಬೈಕ್-ಸ್ಕೂಟರ್‌ಗಳನ್ನು ಕಟ್ಟಿ ಎಳೆಯುವ ಮೂಲಕ ಆಕ್ರೋಶ ಹೊರಹಾಕಿದರು.
ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ ಬೈಕುಗಳನ್ನು ತಳ್ಳಿಕೊಂಡು ಹೋಗುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು, ಕೆಲಕಾಲ ವೃತ್ತದ ಸಂಚಾರ ಬಂದ್ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ದುಬಾರಿ ನೀತಿ ವಿರುದ್ಧ ಘೋಷಣೆ ಮೊಳಗಿಸಿದರು.

‘ತೈಲಗಳ ಮಾರಾಟದ ಮೇಲೆ ಶೇ 26ರಷ್ಟು ತೆರಿಗೆ ಹೆಚ್ಚಳ ಮಾಡಿದ್ದಾರೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್‌ಗೆ ₹3.50, ಡೀಸೆಲ್‌ಗೆ ₹3 ಏರಿಕೆ ಆಗಿದೆ. ಮೇಲಾಗಿ, ಕೇಂದ್ರವೇ ದರ ಕಡಿಮೆ ಮಾಡಬೇಕು ಎಂದು ಅರ್ಥವಿಲ್ಲದ ಮಾತು ಮಾತಾಡುತ್ತಿದ್ದಾರೆ’ ಎಂದು ಈರಣ್ಣ ಕಡಾಡಿ ಕಿಡಿ ಕಾರಿದರು.
‘2021 ನವೆಂಬರ್ 4ರಂದು ಪ್ರಧಾನಿ ಮೋದಿ ಪ್ರತಿ ಲೀಟರ್ ಪೆಟ್ರೋಲ್ ₹5, ಡೀಸೆಲ್ ₹10 ದರ ಕಡಿಮೆ ಮಾಡಿದ್ದರು. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬೊಮ್ಮಾಯಿ ಸರ್ಕಾರ ಕೂಡ ₹7 ಕಡಿಮೆ ಮಾಡಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಮಾರಾಟ ತೆರಿಗೆ ಹೆಚ್ಚು ಮಾಡಿದೆ’ ಎಂದು ಆರೋಪಿಸಿದರು.
Laxmi News 24×7