ಬೆಳಗಾವಿ, ಜೂನ್ 10: ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ ಪ್ರಕರಣದಲ್ಲಿ(Child Trafficking)ಈಗಾಗಲೇ ಪೊಲೀಸರು ವೈದ್ಯ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಆದರೆ ಅಸಲಿಗೆ ಬಂಧಿತ ವೈದ್ಯ ಕಿಂಗ್ಪಿನ್ (Kingpin) ಅಬ್ದುಲ್ ಗಫರ್ ಲಾಡಖಾನ್ ವೈದ್ಯನೇ ಅಲ್ಲ. ಯಾವುದೇ ಅನುಮತಿ ಪಡೆಯದೆ ಕಳೆದ 10 ವರ್ಷಗಳಿಂದ ಕಿತ್ತೂರು ಪಟ್ಟಣದಲ್ಲಿ ಆರ್‌ಎಂಪಿ ವೈದ್ಯ ಎಂದು ಹೇಳಿಕೊಂಡು ಕ್ಲಿನಿಕ್ ನಡೆಸುತ್ತಿದ್ದ. ಈತನ ಬಗ್ಗೆ ಹಲವು ಬಾರಿ ಸ್ಥಳೀಯರು ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇನ್ನು ಮಕ್ಕಳ ಮಾರಾಟ ಅಷ್ಟೇ ಅಲ್ಲದೇ ಭ್ರೂಣಹತ್ಯೆ ಕೂಡ ಮಾಡಿದ್ದಾಗಿ ಮಾಹಿತಿ ಇದೆ.
ಪ್ರಕರಣ ಕುರಿತಾಗಿ ಟಿವಿ9 ವರದಿ ಬೆನ್ನಲ್ಲೇ ಸ್ಥಳಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಎಸ್ಎಸ್ ಸಿದ್ದನ್ನವರ್ ಭೇಟಿ ನೀಡಿದರು. ಕಿತ್ತೂರಿನ ಸೋಮವಾರಪೇಟೆಯಲ್ಲಿರುವ ಅಬ್ದುಲ್ ಕ್ಲಿನಿಕ್ಗೆ ಭೇಟಿ ನೀಡಿ ವಿಚಾರಣೆ ಮಾಡಿದ್ದಾರೆ. ಅಧಿಕಾರಿಗಳು ಕೇಳಿದಾಗ ಹೆಂಡತಿ ಫರಹತ್ ಲಾಡಖಾನ್ ಹೆಸರು ಹೇಳಿದ್ದಾರೆ. ಆಕೆಯದ್ದು ಬಿ ಎಚ್ಎಂಎಸ್ ಆಗಿದೆ ಕ್ಲಿನಿಕ್ ಅನುಮತಿಗಾಗಿ ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದಾರೆ.
ಇನ್ನು ತಾಲೂಕು ಆರೋಗ್ಯಾಧಿಕಾರಿಗೆ ಸ್ಥಳೀಯ ನಿವಾಸಿಗಳಿಂದ ತರಾಟೆ ತೆಗೆದುಕೊಳ್ಳಲಾಗಿದೆ. ಇವನಿಗೆ ಅನುಮತಿ ಹೇಗೆ ಕೊಟ್ಟಿದ್ದೀರಿ. ನಕಲಿ ವೈದ್ಯನ ಮನೆ ಹರಾಜು ಹಾಕುವಂತೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಅಬ್ದುಲ್ ಲಾಡಖಾನ್ನ್ನು ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಕಿಂಗ್ಪಿನ್ ಡಾ.ಅಬ್ದುಲ್ ಲಾಡಖಾನ್, ನೇಗಿನಹಾಳ ಗ್ರಾಮದ ಮಹಾದೇವಿ ಜೈನ್, ಚಂದನ ಸುಬೇದಾರ್, ಪವಿತ್ರಾ ಹಾಗೂ ಪ್ರವೀಣ್ನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.