ನರಗುಂದ: ಬರದಿಂದ ತತ್ತರಿಸಿದ್ದ ತಾಲ್ಲೂಕಿನ ರೈತರಿಗೆ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಹೊಸ ಭರವಸೆ ಮೂಡಿಸಿದೆ. ಕೃಷಿ ಹೊಂಡಗಳು, ಕೆರೆ- ಕಟ್ಟೆಗಳು ಭರ್ತಿಯಾಗಿದ್ದು ಕೃಷಿಕರಲ್ಲಿ ಉತ್ಸಾಹ ತುಂಬಿದೆ.
ಕಳೆದ ಮೂರು ವರ್ಷಗಳಿಂದ ಮುಂಗಾರು ಮಳೆ ಸಕಾಲಕ್ಕೆ ಬಾರದ ಕಾರಣ ರೈತರು ತೊಂದರೆ ಅನುಭವಿಸಿದ್ದರು.
ಆದರೆ, ಈ ಬಾರಿ ರೋಹಿಣಿ ಮಳೆ ಸ್ವಲ್ಪ ತಡವಾಗಿ ಸುರಿದರೂ ಬಿತ್ತನೆಗೆ ಅನುಕೂಲ ಕಲ್ಪಿಸಿದೆ. ಮೃಗಶಿರಾ ಆರಂಭದಿಂದಲೇ ಸುರಿಯುತ್ತಿದ್ದು ರೈತರಿಗೆ ನೆಮ್ಮದಿ ಕೊಟ್ಟಿದೆ. ಮಳೆಯಿಂದಾಗಿ ತಾಲ್ಲೂಕಿನ ಕೃಷಿ ಹೊಂಡಗಳು ತುಂಬಿವೆ. ಮುಂದಿನ ದಿನಗಳಲ್ಲಿ ಮಳೆ ಬರುವುದು ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೃಷಿ ಹೊಂಡಗಳು ಸಹಾಯಕ್ಕೆ ಬರಲಿವೆ ಎಂಬುದು ರೈತರ ಸಂತಸಕ್ಕೆ ಕಾರಣವಾಗಿದೆ.