ಬೆಳಗಾವಿ -: ಕೋವಿಡ್-೧೯ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೇಕಾರ ಕುಟುಂಬಗಳಿಂದ ನೇರವಾಗಿ ಸೀರೆ ಖರೀದಿಸುವುದು ಹಾಗೂ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಚಿವರಾದ ಶ್ರೀಮಂತ ಪಾಟೀಲ ಭರವಸೆ ನೀಡಿದರು.
ಪ್ರವಾಸಿಮಂದಿರದಲ್ಲಿ ಮಂಗಳವಾರ (ಜೂ.9) ನಡೆದ ನೇಕಾರರ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊಲಿಗೆ ಯಂತ್ರ ಖರೀದಿ, ವಿದ್ಯುತ್ ಮಗ್ಗಗಳ ಅಳವಡಿಕೆ ಸೇರಿದಂತೆ ನೇಕಾರರಿಗೆ ನೀಡಲಾಗುವ ಸೌಲಭ್ಯಗಳ ಹಂಚಿಕೆಯ ಮಾರ್ಗಸೂಚಿ ಇನ್ನಷ್ಟು ಸರಳೀಕರಣಗೊಳಿಸಲಾಗುತ್ತಿದೆ. ಇದಲ್ಲದೇ ನೇಕಾರ ಕುಟುಂಬಗಳ ಸಮಗ್ರ ಸಮೀಕ್ಷೆ ಕೈಗೊಂಡು ಗುರುತಿನಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಇನ್ನು ಎರಡು ತಿಂಗಳ ಬಳಿಕ ಈ ಕೆಲಸ ಆಗಲಿದೆ ಎಂದು ತಿಳಿಸಿದರು.
ನೇಕಾರರ ಎಲ್ಲ ಬೇಡಿಕೆಗಳು ನ್ಯಾಯಯುತವಾಗಿವೆ. ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಸರ್ಕಾರದ ಕಡೆಯಿಂದ ಹೆಚ್ಚಿನ ಸಹಾಯ-ಸೌಲಭ್ಯಗಳು ಸಿಗಬೇಕಿದೆ. ನೇಕಾರರ ಪರಿಸ್ಥಿತಿಯ ಅರಿವು ಇರುವುದರಿಂದ ನೇಕಾರರ ಸಮುದಾಯದ ಏಳ್ಗೆಗೆ ಸೂಕ್ತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ಅಸಂಘಟಿತ ವಲಯಕ್ಕೆ ಸೇರ್ಪಡೆ-ಪರಿಶೀಲನೆ:
ಕೂಲಿ ನೇಕಾರರನ್ನು ಕೂಡ ಅಸಂಘಟಿತ ವಲಯದ ಕಾರ್ಮಿಕರು ಎಂದು ಗುರುತಿಸುವ ಬಗ್ಗೆ ಸೂಕ್ತ ಪ್ರಸ್ತಾವ ರೂಪಿಸಿ ಮುಖ್ಯಮಂತ್ರಿಗಳ ಜತೆ ಮಾತನಾಡುವುದಾಗಿ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.
ಸಾಲ ಸೇರಿದಂತೆ ನೇಕಾರರಿಗೆ ಇನ್ನೂ ಹೆಚ್ಚಿನ ಆರ್ಥಿಕ ನೆರವು ಒದಗಿಸಲು ಕೇಂದ್ರ ಸರಕಾರ ಕೈಜೋಡಿಸಿದರೆ ಇನ್ನಷ್ಟು ಅನುಕೂಲ ಆಗಲಿದೆ. ಈ ಬಗ್ಗೆ ಕೇಂದ್ರ ಸಚಿವರ ಜತೆಯೂ ಚರ್ಚಿಸಲಾಗಿದೆ ಎಂದರು.
ಸೀರೆ ಖರೀದಿ ಅಥವಾ ಲಭ್ಯವಿರುವ ದಾಸ್ತಾನಿನ ಮೇಲೆ ಸಾಲ ನೀಡುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಆದಷ್ಟು ಬೇಗನೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ಶ್ರೀಮಂತ ಪಾಟೀಲ ಭರವಸೆ ನೀಡಿದರು.
ಸರ್ಕಾರವೇ ಸೀರೆ ಖರೀದಿಸಿದರೆ ಅನುಕೂಲ:
ಈಗಾಗಲೇ ನೇಕಾರರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗಿರುತ್ತದೆ. ಮುಖ್ಯವಾಗಿ ನೇಕಾರರು ಉತ್ಪಾದಿಸಿರುವ ಸೀರೆಗಳನ್ನು ಸರಕಾರವೇ ಖರೀದಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಭಯ್ ಪಾಟೀಲ ಒತ್ತಾಯಿಸಿದರು.
ಕಿಸಾನ್ ಸಮ್ಮಾನ್ ಮಾದರಿಯಲ್ಲಿ ನೇಕಾರ ಸಮ್ಮಾನ್ ನಿಧಿ ಸ್ಥಾಪಿಸಬೇಕು. ಕೊರೊನಾ ಹಿನ್ನೆಲೆಯಲ್ಲಿ ಕಾರ್ಮಿಕರು, ಚಾಲಕರು ಸೇರಿದಂತೆ ಉಳಿದವರಿಗೆ ಐದು ಸಾವಿರ ರೂಪಾಯಿ ನೆರವು ನೀಡಿ ನೇಕಾರರಿಗೆ ಮಾತ್ರ ಎರಡು ಸಾವಿರ ಪ್ರಕಟಿಸಲಾಗಿದ್ದು, ಈ ತಾರತಮ್ಯವನ್ನು ಸರಿಪಡಿಸಬೇಕು ಎಂದರು.
ಸರ್ಕಾರ ನೇಕಾರರ ನೆರವಿಗೆ ಧಾವಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಹಾಗೂ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಸೇರಿದಂತೆ ಕೊರೊನಾ ವಾರಿಯರ್ಸಗಳಿಗೆ ವಿತರಿಸಲು ತಕ್ಷಣವೇ ನೇಕಾರರಿಂದ ನೇರವಾಗಿ ಸೀರೆ ಖರೀದಿಸುವುದು ಸೂಕ್ತವಾಗಿದೆ ಎಂದು ಹೇಳಿದರು.
ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಿ ಸಮಸ್ಯೆ ಪರಿಹಾರದ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗುವುದು. ಈ ಸಭೆಗೆ ನೇಕಾರರ ಮುಖಂಡರನ್ನು ಆಹ್ವಾನಿಸಲಾಗುವುದು ಎಂದು ಅಭಯ್ ಪಾಟೀಲ ಹೇಳಿದರು.
ಎಂ.ಎಸ್.ಎಂ.ಇ. ಅಡಿಯಲ್ಲಿ ಸಾಲ ತೆಗೆದುಕೊಂಡಿದ್ದರೆ ಸದ್ಯಕ್ಕೆ ರಿಕವರಿ ಕೈಬಿಡುವುದರ ಜತೆಗೆ ಹೆಚ್ಚುವರಿ ಸಾಲ ನೀಡುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಈ ಬಗ್ಗೆ ಬ್ಯಾಂಕರ್ಸ್ ಸಭೆ ಕರೆದು ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ ಐದು ಸಾವಿರಕ್ಕೂ ಅಧಿಕ ಕೈಮಗ್ಗ ನೇಕಾರರಿಂದ ದಾಖಲಾತಿ ಪಡೆದುಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಘೋಷಿಸಿರುವ ಪರಿಹಾರಧನ ಶೀಘ್ರ ಜಮಾ ಮಾಡಲಾಗುವುದು. ಅದೇ ರೀತಿ ವಿದ್ಯುತ್ ಮಗ್ಗದ ಮಾಲೀಕರಿಗೂ ಪರಿಹಾರವನ್ನು ನೀಡಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಕೀರ್ತಪ್ಪ ಗೋಟೂರ ತಿಳಿಸಿದರು.
ಸೀರೆ ಖರೀದಿಗೆ ಮುಖಂಡರ ಆಗ್ರಹ:
ನೇಕಾರರು ಈಗಾಗಲೇ ಉತ್ಪಾದಿಸಿರುವ ಸೀರೆಗಳನ್ನು ಖರೀದಿಸಬೇಕು. ನೇಕಾರರಿಗೂ ಐದು ಸಾವಿರ ಪರಿಹಾರ ನೀಡಬೇಕು. ನೇಕಾರರ ಸಾಲಮನ್ನಾ ಯೋಜನೆ ಮಾರ್ಗಸೂಚಿ ಸರಳೀಕರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ನೇಕಾರರ ಮುಖಂಡರು ಸಚಿವರ ಮುಂದಿಟ್ಟರು.
ಲಾಕ್ ಡೌನ್ ನಿಂದ ನೇಕಾರರು ಕಷ್ಟಕ್ಕೆ ಸಿಲುಕಿರುವುದರಿಂದ ಮಾರುಕಟ್ಟೆ ಪರಿಸ್ಥಿತಿ ಸುಧಾರಿಸುವವರೆಗೆ ಆದ್ದರಿಂದ ತುರ್ತಾಗಿ ಸೀರೆ ಖರೀದಿ ಸೇರಿದಂತೆ ರೈತರಿಗೆ ನೀಡುವಂತೆ ಶೂನ್ಯ ಬಡ್ಡಿದರದಲ್ಲಿ ನೇಕಾರರಿಗೂ ಮೂರು ಲಕ್ಷ ರೂಪಾಯಿ ಸಾಲ ನೀಡಬೇಕು ಎಂದು ನೇಕಾರ ಮುಖಂಡರು ಒತ್ತಾಯಿಸಿದರು.
ಅಸಂಘಟಿತ ಕಾರ್ಮಿಕರ ಪಟ್ಟಿಯಲ್ಲಿ ಕೂಲಿ ನೇಕಾರರನ್ನು ಸೇರಗೊಡೆಗೊಳಿಸಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಲಾಯಿತು.
ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್. ಹಾಗೂ ನೇಕಾರ ಸಮುದಾಯದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನೇಕಾರ ಮುಖಂಡರಿಂದ ಮನವಿಪತ್ರವನ್ನು ಸಚಿವ ಶ್ರೀಮಂತ ಪಾಟೀಲ ಸ್ವೀಕರಿಸಿದರು.