ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಅವರು 3ನೇ ಬಾರಿ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೂ ನಮ್ಮ ರಾಜ್ಯಕ್ಕೆ ಉತ್ತಮ ಖಾತೆ ಸಿಗಲಿ, ಹೆಚ್ಚು ಸ್ಥಾನ ಸಿಗಲಿ ಎಂದು ಆಶಿಸಿದ್ದಾರೆ.
ಬೆಂಗಳೂರು, ಜೂನ್.09: ನರೇಂದ್ರ ಮೋದಿ (Narendra Modi) ಇಂದು ಸಂಜೆ 7ಗಂಟೆ 15 ನಿಮಿಷಕ್ಕೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಶುಭ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗಣ್ಯರು, ಬಿಜೆಪಿ-ಜೆಡಿಎಸ್ ಕಾರ್ಯಕರ್ತರೆಲ್ಲರೂ ದೆಹಲಿಯತ್ತ ಮುಖ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ (Dr G Parameshwar) ಅವರು ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಾಧ್ಯಮಗಳಿಗೆ ಮಾತನಾಡಿದ ಅವರು, ಮೂರನೇ ಬಾರಿಗೆ ಪ್ರಧಾನಿ ಆಗ್ತಿರೋ ಮೋದಿಗೆ ಅಭಿನಂದನೆಗಳು. ಕಳೆದ 10 ವರ್ಷದಲ್ಲಿ ಜನ ಸಮುದಾಯಗಳು ತೊಂದರೆಗೆ ಈಡಾಗಿದ್ದಾರೆ. ಜನರ ದೃಷ್ಟಿಯಿಂದ ಕೆಲಸ ಮಾಡಬೇಕು. ಅದಕ್ಕೆ ವಿರುದ್ದವಾದ ತೀರ್ಮಾನ ಮಾಡಿದ್ದಾರೆ. ಹಿಂದೆ ಏನೆಲ್ಲಾ ತಪ್ಪುಗಳಾಗಿದೆ ಅದನ್ನ ಸರಿಪಡಿಸಿಕೊಳ್ಳಲಿ. ಕರ್ನಾಟಕಕ್ಕೆ ಹೆಚ್ಚು ಸ್ಥಾನ ಸಿಗಲಿ. ಮಂತ್ರಿಗಳು ರಾಜ್ಯದ ಹಿತವನ್ನು ಕಾಪಾಡಲು ವಿಫಲರಾಗಿದ್ದಾರೆ. ನಿರ್ಮಲಾ ಸೀತಾರಾಮನ್ ಸೇರಿ ಹಲವರು ವಿಫಲರಾಗಿದ್ದಾರೆ. ನಮ್ಮ ರಾಜ್ಯಕ್ಕೆ ಅನುಕೂಲವಾಗುವ ಖಾತೆ ಸಿಗಲಿ ಎಂದು ಡಾ.ಜಿ.ಪರಮೇಶ್ವರ್ ಹಾರೈಸಿದರು.