ಬಳ್ಳಾರಿ: ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸ್ಥೂಲಕಾಯ ಹೊಂದಿದ್ದ ನೂರು ಪೊಲೀಸರನ್ನು ಸದೃಢರಾನ್ನಾಗಿರುವ ಕಾರ್ಯ ಕಳೆದ 10 ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ.
ಜಿಲ್ಲೆಯಲ್ಲಿ ಒಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇಬ್ಬರು ಎಎಸ್‌ಪಿ, ಮೂವರು ಡಿವೈಎಸ್‌ಪಿ, 15 ಮಂದಿ ಪಿಐ, 45 ಪಿಎಸ್‌ಐಗಳೂ ಸೇರಿದಂತೆ ಒಟ್ಟು 867 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿದ್ದಾರೆ.
ಇತ್ತೀಚೆಗೆ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಬಿಎಂಐ (ಬಾಡ್ ಮಾಸ್ ಇಂಡೆಕ್ಸ್) ಅಂಕ 30ಕ್ಕಿಂತ ಅಧಿಕವಿರುವ (ಸ್ಥೂಲಕಾಯ) ನೂರು ಸಿಬ್ಬಂದಿಗೆ ಮೇ 29ರಿಂದ ಆರೋಗ್ಯ ಶಿಬಿರ ಕೈಗೊಳ್ಳಲಾಗಿದೆ.
ನೂರು ಸಿಬ್ಬಂದಿಯನ್ನು ಮೂರು ತಂಡಗಳಾಗಿ ವಿಭಾಗಿಸಲಾಗಿದೆ. ಇದರಲ್ಲಿ ಮೂವರು ಪಿಎಸ್‌ಐಗಳು, 10 ಎಎಸ್‌ಗಳು ಇದ್ದಾರೆ. 21 ದಿನಗಳ ವರೆಗೆ ಇವರಿಗೆ ನಿತ್ಯ ಆರೋಗ್ಯ ತರಬೇತಿ ನೀಡಲಾಗುತ್ತದೆ. ‘ಸುರಕ್ಷಿತ ಬಳ್ಳಾರಿಗಾಗಿ ಸದೃಢ ಪೊಲೀಸ್’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಪೊಲೀಸರಿಗೆ ಆರೋಗ್ಯ ಪಾಠ ಮಾಡಲಾಗುತ್ತಿದೆ.