ಬೆಂಗಳೂರು: ಪತ್ನಿ ಜತೆ ಅಕ್ರಮ ಸಂಬಂಧ ಹಾಗೂ ಹಣಕಾಸಿನ ವಿಚಾರಕ್ಕೆ ಸ್ನೇಹಿತನನ್ನು ಹತ್ಯೆಗೈದು, ಬಳಿಕ ಮೃತದೇಹವನ್ನು ಐದಾರು ತುಂಡುಗಳನ್ನಾಗಿ ಮಾಡಿ ಬಿಸಾಡಿದ್ದ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಿನಾಪುರ ನಿವಾಸಿ ಮಾಧವ ರಾವ್ (41) ಬಂಧಿತ ಆರೋಪಿ.
ಈತ ಮೇ 28ರಂದು ಸ್ನೇಹಿತ ಶ್ರೀನಾಥ್‌ನನ್ನು ಹತ್ಯೆಗೈದು, ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ಬೆಳತ್ತೂರು ಬಳಿಯ ಮೋರಿಯಲ್ಲಿ ಎಸೆದು ಪರಾರಿಯಾಗಿದ್ದ. ಈ ಸಂಬಂಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮತ್ತೂಂದೆಡೆ ಸಂಪಿಗೆಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಎಂ.ಪ್ರಶಾಂತ್, ತಮ್ಮ ಠಾಣೆಯಲ್ಲಿ ಶ್ರೀನಾಥ್ ನಾಪತ್ತೆ ಬಗ್ಗೆ ದಾಖಲಾಗಿದ್ದ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿದಾಗ ಆರೋಪಿ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಭೀಕರ ಕೊಲೆ ರಹಸ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದರು.
ಮೇ 28ರಂದು ಕೆಲಸಕ್ಕೆಂದು ಹೋಗಿದ್ದ ಶ್ರೀನಾಥ್ ವಾಪಸ್ ಬಂದಿಲ್ಲ. ಅದರಿಂದ ಗಾಬರಿಗೊಂಡ ಆತನ ಪತ್ನಿ ಎಲ್ಲೆಡೆ ಹುಡುಕಾಟ ನಡೆಸಿ, ಮೇ 29ರಂದು ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದರು.
ಏನಿದು ಭೀಕರ ಕೊಲೆ ರಹಸ್ಯ?: ಮಾರ್ಗದರ್ಶಿ ಚಿಟ್ ಫಂಡ್‌ನ ಬಸವೇಶ್ವರನಗರ ಶಾಖೆಯಲ್ಲಿ ಡೆವಲಪ್‌ಮೆಂಟ್ ಅಧಿಕಾರಿಯಾಗಿದ್ದ ಶ್ರೀನಾಥ್, ಸಂಪಿಗೆಹಳ್ಳಿಯ ಅಂಜನಾದ್ರಿ ಲೇಔಟ್‌ನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ವಾಸವಾಗಿದ್ದ. ಈ ನಡುವೆ 2 ವರ್ಷಗಳ ಹಿಂದೆ ಹಾಲೋಬ್ರಿಕ್ಸ್ ಕೆಲಸ ಮಾಡುತ್ತಿದ್ದ ಮಾಧವ್ ರಾವ್ ಪರಿಚಯವಿದ್ದು, ಈತ ಶ್ರೀನಾಥ್‌ನ, ಚಿಂಟ್‌ಫಂಡ್‌ನಲ್ಲಿ ಹಣ ಹೂಡಿಕೆ ಮಾಡಿ, 5 ಲಕ್ಷ ರೂ. ಚೀಟಿ ಎತ್ತಿಕೊಂಡಿದ್ದ. ಆದರೆ ನಿಗದಿತ ಸಮಯಕ್ಕೆ ಹಣ ವಾಪಸ್ ನೀಡಿರಲಿಲ್ಲ. ಆದರಿಂದ ಆಗಾಗ್ಗೆ ಶ್ರೀನಾಥ್, ಮಾಧವ ರಾವ್ ಮನೆಗೆ ಬಂದು ಹಣ ವಾಪಸ್ ಕೊಡುವಂತೆ ದುಂಬಾಲು ಬಿದ್ದಿದ್ದ. ಆದರೆ ಸಬೂಬುಗಳನ್ನು ಹೇಳಿ ಆರೋಪಿ ದಿನ ಮುಂದೂಡುತ್ತಿದ್ದ ಎಂದು ಪೊಲೀಸರು ಹೇಳಿದರು.