ಬೆಳಗಾವಿ: ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ರೈತನೋರ್ವ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭೀಕರ ಬರಕ್ಕೆ ಬೆಳೆ ಕೈಕೊಟ್ಟಿದ್ದು ಜೀವನ ನಡೆಸಲು ಸಾಲ ಮಾಡಿದ್ದರು.
ಸಾಲ ಮರುಪಾವತಿ ವಿಳಂಬವಾಗಿದ್ದಕ್ಕೆ ಸಾಲ ನೀಡಿದ್ದ ಮಹಿಳೆ ರೈತನ ಪತ್ನಿ, ಪುತ್ರನಿಗೆ ಗೃಹಬಂಧನ ಮಾಡಿದ್ದಾಳೆ.
ಪತ್ನಿ-ಪುತ್ರನನ್ನು ಗೃಹಬಂಧನದಲ್ಲಿ ಇಟ್ಟಿದ್ದಕ್ಕೆ ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜು ಖೋತಗಿ ಎಂಬ ರೈತ ಇಸ್ಲಾಂಪುರ ಗ್ರಾಮದ ಸಿದ್ದವ್ವ ಬಯ್ಯನವರ ಎಂಬ ಮಹಿಳೆ ಬಳಿ ಐದು ತಿಂಗಳ ಹಿಂದೆ ಒಂದೂವರೆ ಲಕ್ಷ ಸಾಲ ಪಡೆದಿದ್ದರು. ಪಡೆದಿದ್ದ ಸಾಲಕ್ಕೆ ಪ್ರತಿ ತಿಂಗಳು ಶೇ. 10ರಷ್ಟು ಬಡ್ಡಿ ಸಹ ನೀಡುತ್ತಿದ್ದರು.
ಎರಡು ದಿನಗಳ ಹಿಂದೆ ಸಿದ್ದವ್ವ ಏಕಾಏಕಿ ರಾಜು ಅವರನ್ನು ಮನೆಗೆ ಕರೆದು ಕೊಟ್ಟ ಸಾಲ ಮರಳಿಸುವಂತೆ ತಾಕೀತು ಮಾಡಿದ್ದಾರೆ. ಸಾಲ ಮರಳಿಸಲು ಒಂದೆರಡು ದಿನ ಕಾಲಾವಕಾಶ ಕೇಳಿದಕ್ಕೆ ಆಗುವುದಿಲ್ಲ, ಸಾಲ ವಾಪಾಸ್ ಕೊಡುವವರೆಗೂ ಪುತ್ರನನ್ನ ಮನೆಯಲ್ಲಿ ಬಿಟ್ಟು ಹೋಗುವಂತೆ ಹೇಳಿದ್ದಾರೆ.
ಈ ವೇಳೆ ಪುತ್ರ ಬಸವರಾಜ್ನನ್ನು ತಂದೆ ರಾಜು ಸಿದ್ದವ್ವ ಮನೆಯಲ್ಲಿ ಬಿಟ್ಟು ಬಂದಿದ್ದರು. ಮಾರನೇ ದಿನ ಕರೆಯಲು ಹೋದ ದುರ್ಗವ್ವಗೂ ಗೃಹ ಬಂಧನದಲ್ಲಿಡಲಾಗಿತ್ತು. ಇದರಿಂದ ಮನನೊಂದು ರೈತ ರಾಜು ಖೋತಗಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.