ಬಿಜೆಪಿ ಬಿಜೆಪಿಯಲ್ಲಿ ಹಾಲಿ ಸದಸ್ಯ ಎನ್.ರವಿಕುಮಾರ್ ಅವರನ್ನು ಮತ್ತೊಂದು ಅವಧಿಗೆ ಆಯ್ಕೆಗೊಳಿಸಬೇಕೆಂಬುದು ಪಕ್ಷದ ವಲಯದಲ್ಲಿ ದೃಢಪಟ್ಟಿದೆ. ಇನ್ನುಳಿದ ಎರಡು ಸ್ಥಾನಗಳನ್ನು ಯಾರಿಗೆ ಕೊಡಬೇಕೆಂಬ ಬಗ್ಗೆ ಪ್ರಾದೇಶಿಕ ಹಾಗೂ ಜಾತಿವಾರು ಚರ್ಚೆ ನಡೆಸಬೇಕಿದೆ. ಇನ್ನೆರಡು ದಿನದಲ್ಲಿ ಈ ಸಂಬಂಧ ಸಭೆ ಸೇರಿ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲು ಬಿಜೆಪಿ ನಿರ್ಧರಿಸಿದೆ.
ಮೂರರ ಪೈಕಿ ಒಂದು ಸ್ಥಾನವನ್ನು ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ನೀಡಬೇಕೆಂಬ ವಾದ ಕರಾವಳಿ ಭಾಗದ ಶಾಸಕರಿಂದ ಕೇಳಿ ಬಂದಿದೆ. ಅದೇ ರೀತಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ನೀಡಬೇಕೆಂದು ಒಂದು ವರ್ಗ ಲಾಬಿ ಮಾಡುತ್ತಿದೆ. ಅಂತಿಮವಾಗಿ ಈ ಬಗ್ಗೆ ವರಿಷ್ಠರೇ ತೀರ್ಮಾನ ಕೈಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಆದಾಗಿಯೂ ಈ ಎಲ್ಲ ವಿಚಾರಗಳು ಕೋರ್ ಕಮಿಟಿ ಸಭೆಯಲ್ಲೇ ಇತ್ಯರ್ಥವಾಗಬೇಕಿದ್ದು, ಉತ್ತರ ಕರ್ನಾಟಕ ಭಾಗದಿಂದ ಒಬ್ಬರಿಗಾದರೂ ಅವಕಾಶ ನೀಡಬೇಕಾಗುತ್ತದೆ. ರವಿಕುಮಾರ್ ಹಿಂದುಳಿದ ವರ್ಗಕ್ಕೆ ಸೇರಿರುವುದರಿಂದ ರಘುನಾಥ್ ಮಲ್ಕಾಪುರೆ ಸಹಿತ ಹಿಂದುಳಿದ ವರ್ಗದ ನಾಯಕರು ಮತ್ತೆ ಮೇಲ್ಮನೆ ಪ್ರವೇಶಿಸುವ ಆಸೆ ಕ್ಷೀಣಿಸಲಿದೆ. ರಘು ಕೌಟಿಲ್ಯ, ಮಾಧುಸ್ವಾಮಿ ಕೂಡ ಆಕಾಂಕ್ಷಿಗಳಾಗಿದ್ದಾರೆ.
ಮಹಿಳಾ ಕೋಟಾದಲ್ಲಿ ಒಬ್ಬರಿಗೆ ಅವಕಾಶ ಮಾಡಿಕೊಡಬೇಕೆಂಬ ಪ್ರಬಲ ಆಗ್ರಹವಿದೆ. ಮಾಳವಿಕಾ, ತಾರಾ ಅನುರಾಧಾ, ಶ್ರುತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸಹಿತ ಅನೇಕರು ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್
ಪರಿಷತ್ತಿನಲ್ಲಿ ವಿಧಾನಸಭೆ ಸದಸ್ಯ ಬಲದ ಆಧಾರದಲ್ಲಿ ಆಯ್ಕೆಯಾಗುವ ಈ 11 ಸ್ಥಾನಗಳಲ್ಲಿ ಲೆಕ್ಕಾಚಾರದ ಪ್ರಕಾರ 7 ಸ್ಥಾನಗಳು ಕಾಂಗ್ರೆಸ್ ಪಾಲಾಗಲಿವೆ. ಅವುಗಳಿಗೆ ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ತಮ್ಮ ನಾಯಕರು, ಜಾತಿ, ಪ್ರದೇಶ ಮತ್ತಿತರ ಪ್ರಭಾವ ಬೀರಿ ಅವಕಾಶ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆದಿದೆ. ಈಗಾಗಲೇ ಅವಧಿ ಮುಗಿದಿರುವ ಕಾಂಗ್ರೆಸ್‌ನ ಅರವಿಂದ ಕುಮಾರ್‌ಅರಳಿ, ಎನ್.ಎಸ್. ಬೋಸರಾಜು, ಕೆ. ಗೋವಿಂದರಾಜು, ಹರೀಶ್ ಕುಮಾರ್ ಜತೆಗೆ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ, ಕೆಪಿಸಿಸಿ ಕಚೇರಿ ಕಾರ್ಯದರ್ಶಿ ಹಾಗೂ ಸುಮಾರು ಕೆಪಿಸಿಸಿಯ 15 ಅಧ್ಯಕ್ಷರೊಂದಿಗೆ ಕೆಲಸ ಮಾಡಿದ ಅನುಭವ ಇರುವ ಎಲ್. ನಾರಾಯಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ (ಆಡಳಿತ) ವಿಜಯ ಮುಳಗುಂದ, ರಮೇಶ್ ಬಾಬು, ಪಕ್ಷದ ಪ್ರಧಾನ ಕಾರ್ಯದರ್ಶಿ ವಿನಯ್ ಕಾರ್ತಿಕ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್, ಕೆಪಿಸಿಸಿ ಮುಖ್ಯ ವಕ್ತಾರ ಎ.ಎನ್. ನಟರಾಜ್‌ಗೌಡ, ಮಹಿಳಾ ಕೋಟಾದಡಿ ಐಶ್ವರ್ಯ ಮಹದೇವ್, ಕವಿತಾ ರೆಡ್ಡಿ, ಕಮಲಾಕ್ಷಿ ರಾಜಣ್ಣ ಮತ್ತಿತರರು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
ಜೆಡಿಎಸ್
ಜೆಡಿಎಸ್‌ನಿಂದ ಆಯ್ಕೆಯಾಗಿರುವ ಬಿ.ಎಂ. ಫಾರೂಕ್ ಮರು ಆಯ್ಕೆ ಬಯಸುತ್ತಿದ್ದಾರೆ. ಆದರೆ, ಕಳೆದ ಬಾರಿ ಅವಕಾಶ ಕೊಟ್ಟರೂ ಸಾಧನೆ ಶೂನ್ಯ ಎನ್ನುವ ಮಾತು ಜೆಡಿಎಸ್ ವಲಯದಲ್ಲಿದೆ. ಅಲ್ಲದೆ, ಜವರಾಯಿಗೌಡ ಹಾಗೂ ಕುಪೇಂದ್ರರೆಡ್ಡಿ ಕೂಡ ಆಕಾಂಕ್ಷಿಗಳಾಗಿದ್ದು, ವರಿಷ್ಠರ ಕೃಪೆ ಯಾರ ಮೇಲೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ.