ಬೆಂಗಳೂರು: ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡಿರುವ ಟಾಪರ್‌ಗಳನ್ನು ಬೆಂಗಳೂರಿನಲ್ಲಿ ನಿನ್ನೆ ಮಂಗಳವಾರ ಸನ್ಮಾನಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯದ ಅನುದಾನವನ್ನು ಅವಲಂಬಿಸದೆ ಸರ್ಕಾರಿ ಶಾಲೆಗಳನ್ನು ಸಿಎಸ್‌ಆರ್ ಅಡಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಿದೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಟಾಪರ್‌ಗಳಾದ ಪ್ರಥಮ ರ್ಯಾಂಕ್ ಪಡೆದ ಅಂಕಿತಾ ಮತ್ತು ತೃತೀಯ ರ್ಯಾಂಕ್ ಪಡೆದ ನವನೀತ್ ಅವರಿಗೆ ಕ್ರಮವಾಗಿ 5 ಲಕ್ಷ ಮತ್ತು 2 ಲಕ್ಷ ರೂಪಾಯಿಗಳನ್ನು ನೀಡಿ ಸನ್ಮಾನಿಸಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯ 20 ಸರ್ಕಾರಿ ಶಾಲೆಗಳ ಕಾಮಗಾರಿ ಆರಂಭವಾಗಿದೆ. ಸಿಎಸ್‌ಆರ್ ನೆರವಿನ ಅಡಿಯಲ್ಲಿ ಅಭಿವೃದ್ಧಿಪಡಿಸಿದ ಶಾಲೆಗಳ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.