ಮೂಡಲಗಿ: ಎತ್ತ ಕಣ್ಣು ಹಾಯಿಸಿದರೂ ಕುಸ್ತಿ ಪೈಲ್ವಾನರು ಮತ್ತು ಪೈಲ್ವಾನರನ್ನು ಹುರದುಂಬಿಸುವ ಕುಸ್ತಿ ಅಭಿಮಾನಗಳು. ಒಂದೊಂದು ಜೋಡಿಗಳು ಕುಸ್ತಿ ಅಖಾಡಕ್ಕೆ ಇಳಿಯುತ್ತಿದ್ದಂತೆ ಸೇರಿದ ಜನರು ಹೋ ಎಂದು ಚಪ್ಪಾಳೆಯೊಂದಿಗೆ ಪೈಲ್ವಾನರನ್ನು ಬರಮಾಡಿಕೊಳ್ಳುತ್ತಿದ್ದರು.

‘ಹಾಕು ಪೇಚು, ಒಗಿ ಡಾವು, ಚಿತ್ ಮಾಡು ಎಂದೆಲ್ಲ ಚಪ್ಪಾಳೆ ತಟ್ಟೆ, ಸಿಳ್ಳೇ ಹಾಕಿ ಜಟ್ಟಿಗಳನ್ನು ಸೇರಿದ ಪ್ರೇಕ್ಷಕರು ಹುರುದುಂಬಿಸುತ್ತಿದ್ದರು’ ಇದು ಮೂಡಲಗಿ ತಾಲ್ಲೂಕಿನ ಪವಾಡ ಪ್ರಸಿದ್ಧಿಯ ಸುಣಧೋಳಿಯ ಜಡಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಕುಸ್ತಿ ಹಣಹಣಿಯ ಚಿತ್ರಣ.
ಸುಣಧೋಳಿ ಗ್ರಾಮದಲ್ಲಿ ಹಲವಾರು ದಶಕಗಳಿಂದ ಜಡಿಸಿದ್ದೇಶ್ವರ ಜಾತ್ರೆಯಲ್ಲಿ ಕುಸ್ತಿ ಪಂದ್ಯಗಳು ನಡೆದುಕೊಂಡು ಬಂದಿವೆ. ಮರೆಯಾಗುತ್ತಿರುವ ಕುಸ್ತಿಗೆ ಇನ್ನಷ್ಟು ಉತ್ತೇಜ ನೀಡುವ ಸಲುವಾಗಿ ಈ ವರ್ಷ ಕುಸ್ತಿ ಆಡಲು ಮಠದ ಪಕ್ಕದಲ್ಲಿ ಸುಸಜ್ಜಿತೆ ಕುಸ್ತಿ ಕಣವನ್ನು ಸಿದ್ಧಗೊಳಿಸಿದ್ಧಾರೆ. ಹೀಗಾಗಿ ಕುಸ್ತಿಪಟುಗಳು ಅಖಾಡಕ್ಕೆ ಇಳಿಯಲು ಎಲ್ಲಿಲ್ಲದೆ ಖುಷಿಪಟ್ಟರು.
ಈ ವರ್ಷದ ಜಾತ್ರೆಯಲ್ಲಿ 36 ತಂಡಗಳ ಮಧ್ಯ ಕುಸ್ತಿಗಳ ಹಣಾಹಣಿ ಜರುಗಿತು. ಜಮಖಂಡಿ, ತೇರದಾಳ, ಚಿಮ್ಮಡ, ಬನಹಟ್ಟಿ, ಮುಧೋಳ, ಮಹಾಲಿಂಗಪೂರ ಸೇರಿದಂತೆ ವಿವಿಧೆಡಯಿಂದ ಬಂದಿದ್ದ ಜಟ್ಟಿಗಳು ಸುಡುಬಿಸಲಿನ ಪರಿವೇ ಇಲ್ಲದಂತೆ ಆಖಾಡದಲ್ಲಿ ಸೆಣಸಾಡಿ ಸೇರಿದ ಜನರನ್ನು ರೋಮಾಂಚನಗೊಳಿಸಿದರು. ಸಂಜೆಯಾಗುತ್ತಿದ್ದಂತೆ ಕುಸ್ತಿ ಸೆಣಸಾಟಕ್ಕೆ ವಿಶೇಷ ರಂಗು ಬಂದಿತ್ತು. ಎದುರಾಳಿಯನ್ನು ಮಣಿಸಲು ಪಟ್ಟು ಹಾಕುತ್ತಿದ್ದಂತೆ ಸೇರಿದ ಜನರು ಕೇಕೇ ಹಾಕಿ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸುತ್ತಿದ್ದರು. ಕುಸ್ತಿಯಲ್ಲಿ ಗೆದ್ದವರೊಂದಿಗೆ ಅಲ್ಲಿ ಸೇರಿದ್ದ ಕುಸ್ತಿ ಪ್ರಿಯರು ಶೆಲ್ಪಿ ತೆಗೆದುಕೊಂಡು ಖುಷಿಪಟ್ಟರು.
Laxmi News 24×7