ಮಂಗಳೂರು: ನಗರದ ಅತ್ತಾವರದ ವಸತಿಗೃಹವೊಂದರ ಬಳಿಯಿಂದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಅಪರಾಧಿ ಬಸವರಾಜ್ ಅಲ್ಲಪ್ಪ ಮಡಿವಾಳರ್‌ಗೆ ಮಂಗಳೂರಿನ ನ್ಯಾಯಾಲಯ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2022ರ ಡಿ.13ರಂದು ಬಸವರಾಜ್ ಬಾಲಕಿಯನ್ನು ಪುಸಲಾಯಿಸಿ ಧರ್ಮಸ್ಥಳಕ್ಕೆ ಕರೆಯಿಸಿ ಅಲ್ಲಿಂದ ಬಸ್‌ನಲ್ಲಿ ಬಿಜಾಪುರಕ್ಕೆ ಕರೆದೊಯ್ದಿದ್ದ.ಅಲ್ಲಿಂದ ತಿರುಪತಿಗೆ ಕರೆದೊಯ್ದು ಡಾಬಾವೊಂದರಲ್ಲಿ ಕೆಲಸಕ್ಕೆ ಸೇರಿಸಿ ರೂಮ್‌ನಲ್ಲಿ ವಾಸವಿದ್ದ. ಈ ಸಂದರ್ಭ ಆಕೆಯ ಇಚ್ಛೆಗೆ ವಿರುದ್ಧವಾಗಿ ಹಲವು ಬಾರಿ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಹಾಕಿದ್ದ. ನೊಂದ ಬಾಲಕಿ ಕಾಣೆಯಾದ ಬಗ್ಗೆ ಆಕೆಯ ಮಾವ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ ನೊಂದ ಬಾಲಕಿ ಹಾಗೂ ಬಸವರಾಜ್‌ನನ್ನು ತಿರುಪತಿಯಿಂದ ಕರೆ ತಂದಿದ್ದರು. ತನಿಖೆ ನಡೆಸಿದ ಅಂದಿನ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ. ಅವರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್ಟಿಎಸ್‌ಸಿ-2) ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಈ ಪ್ರಕರಣದಲ್ಲಿ ಅಭಿಯೋಜನೆ ಪರ 13 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು.
ದಾಖಲೆಗಳು, ಪೂರಕ ಸಾಕ್ಷ್ಯ, ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಬಸವರಾಜ್ ಅಲ್ಲಪ್ಪ ಪಡಿವಾಳರ್ ಅವರ ಮೇಲಿನ ಅಪರಾಧ ಸಾಬೀತಾಗಿರುವುದನ್ನು ಪ್ರಕಟಿಸಿ ಅಪರಾಧಿಗೆ 10 ವರ್ಷಗಳ ಕಾಲ ಕಠಿನ ಕಾರಾಗೃಹ ಶಿಕ್ಷೆ ಮತ್ತು 15,000 ರೂ. ದಂಡ ವಿಧಿಸಿದ್ದಾರೆ.

ದಂಡದ ಹಣವನ್ನು ನೊಂದ ಬಾಲಕಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ನಿರ್ದೇಶನ ನೀಡಿದೆ.
ನೊಂದ ಬಾಲಕಿಯು ಅಪ್ರಾಪ್ತೆ ಎನ್ನುವುದು ಪುರಾವೆಯಾಗದಿರುವುದರಿಂದ ಪೋಕೊ ಕಾಯ್ದೆಯಡಿ ಶಿಕ್ಷೆ ವಿಧಿಸಿಲ್ಲ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಬದರೀನಾಥ್ ನಾಯರಿ ಅವರು ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದರು.
Laxmi News 24×7