ಬೆಂಗಳೂರು: ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತೆ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ್ ತಮ್ಮ ಬೆಂಬಲಿಗರೊಂದಿಗೆ ಗುರುವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಟಿಕೆಟ್‌ಗಾಗಿ ಮತ್ತೂಂದು ಸುತ್ತು ಕಸರತ್ತು ನಡೆಸಿದರು.
ಶಾಸಕ ಹಾಗೂ ಪಂಚಮಸಾಲಿ ಸಮುದಾಯದ ನಾಯಕ ವಿನಯ ಕುಲಕರ್ಣಿ, ಬಾಗಲಕೋಟೆ ನಗರಸಭೆ ಸದಸ್ಯರು, ಸ್ಥಳೀಯ ಮಹಿಳಾ ಘಟಕದ ಸದಸ್ಯರು ಸಹಿತ ನೂರಕ್ಕೂ ಅಧಿಕ ಬೆಂಬಲಿಗರು, ಕಾರ್ಯಕರ್ತರೊಂದಿಗೆ ವಿಜಯಾನಂದ ಕಾಶಪ್ಪನವರ್ ದಂಪತಿ, ರಾಜ್ಯ ನಾಯಕರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು. ಈ ವೇಳೆ ತಮ್ಮ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸುತಾರಾಂ ಒಪ್ಪದ ಸಿದ್ದರಾಮಯ್ಯ, ಈಗಾಗಲೇ ಟಿಕೆಟ್ ಕೊಟ್ಟಾಗಿದೆ. ರಾಜ್ಯದಿಂದಲೇ ನಿಮ್ಮ ಹೆಸರು ಕಾಂಗ್ರೆಸ್ ಚುನಾವಣ ಸಮಿತಿಗೆ ಹೋಗಿಲ್ಲ. ಹೀಗಿರುವಾಗ ನಿಮ್ಮ ಆಯ್ಕೆ ಪ್ರಶ್ನೆಯೇ ಬರುವುದಿಲ್ಲ. ಈಗ ಆಯ್ಕೆಯಾದ ಅಭ್ಯರ್ಥಿ ಗೆಲ್ಲಿಸಿಕೊಂಡು ಬನ್ನಿ. ಅನಂತರ ಸೂಕ್ತ ಸ್ಥಾನಮಾನ ನೀಡೋಣ ಎಂದು ಹೇಳಿದರು ಎನ್ನಲಾಗಿದೆ.