ಹಳೇಬೀಡು: ಶಾಲೆ ಮಕ್ಕಳಿಗೆ ಆಕರ್ಷಣೀಯ ಆಗಿರಬೇಕು. ಸರ್ಕಾರಿ ಶಾಲೆ ಖಾಸಗಿ ಹೈಟೆಕ್ ಶಾಲೆಗಿಂತ ಕಡಿಮೆ ಇಲ್ಲ ಎಂಬುದು ಪೋಷಕರಿಗೆ ಮನವರಿಕೆ ಆಗಬೇಕೆಂಬ ಉದ್ದೇಶದಿಂದ ಚಿತ್ರಕಲಾ ಶಿಕ್ಷಕರು ಅಪರೂಪದ ಕಾರ್ಯ ಮಾಡಿದ್ದಾರೆ. ಇದರಿಂದಾಗಿ ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ಕಟ್ಟಡ ಬಣ್ಣದ ಚಿತ್ರಗಳಿಂದ ಕಂಗೊಳಿಸುತ್ತಿದೆ.
ಶಾಲೆಯ ಚಿತ್ರಕಲಾ ಶಿಕ್ಷಕ ಎ.ಎಸ್.ಶಂಕರೇಗೌಡ ಅವರ ಆಸಕ್ತಿಗೆ ಸಹೋದ್ಯೋಗಿಗಳು ಪ್ರೋತ್ಸಾಹಿಸಿದ್ದರಿಂದ ಶಾಲೆಯ ಗೋಡೆಗಳು ಚಿತ್ರಗಳಿಂದ ಅಲಂಕೃತಗೊಂಡಿವೆ. ಗೋಡೆಗಳಲ್ಲಿ ಮೂಡಿರುವ ಚಿತ್ರಗಳು ಅಂದ ಹೆಚ್ಚಿಸಿರುವುದಲ್ಲದೇ ನೋಡಿದವರಿಗೆ ಜಾಗೃತಿ ಮೂಡಿಸುತ್ತಿವೆ.
ಪ್ರತಿ ತರಗತಿಗೂ ಹೊಯ್ಸಳ ರಾಜರ ಹೆಸರು ಇಡಲಾಗಿದೆ. ಕೊಠಡಿಯ ಬಾಗಿಲಿನ ಮೇಲೆ ರಾಜರ ಹೆಸರು, ಅಧಿಕಾರದ ಅವಧಿಯನ್ನು ಬರೆಯಲಾಗಿದೆ. ಶಾಲೆಯ ತರಗತಿ ಕೊಠಡಿಗಳ ಮುಂದೆ ಸಾಗಿದಾಗ ಹೊಯ್ಸಳ ವಂಶದ ಸ್ಥಾಪಕ ನೃಪಕಾಮನಿಂದ ಕೊನೆಯ ದೊರೆ ನಾಲ್ಕನೇ ಬಲ್ಲಾಳನವರೆಗೆ ಪರಿಚಯವಾಗುತ್ತದೆ.
‘ಕೆಪಿಎಸ್ ಶಾಲೆ ಇರುವ ಸ್ಥಳ ಹೊಯ್ಸಳರ ಅರಮನೆ ಹಾಗೂ ರಾಜ ಪರಿವಾರದ ಪ್ರಮುಖರು ವಾಸ ಮಾಡುತ್ತಿದ್ದ ಸ್ಥಳದ ಸಮೀಪದಲ್ಲಿಯೇ ಇದೆ. ಹೀಗಾಗಿ ತರಗತಿ ಕೋಣೆಗಳನ್ನು ನೋಡಿದಾಕ್ಷಣ ಹೊಯ್ಸಳ ಇತಿಹಾಸವನ್ನು ಮೆಲುಕು ಹಾಕಿದಂತಾಗುತ್ತದೆ. ಹೊಯ್ಸಳರು ನಡೆದಾಡಿದ ಮಣ್ಣಿನಲ್ಲಿರುವ ಶಾಲೆಯಲ್ಲಿ ಓದುತ್ತಿರುವ ಮಕ್ಕಳೇ ಧನ್ಯರು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಬಣ್ಣಿಸುತ್ತಾರೆ.
ಚಿತ್ರಕಲಾ ಶಿಕ್ಷಕರು, ಕಟ್ಟಡದ ಗೋಡೆಗಳಿಗೆ ಬಣ್ಣ ಬಳಿದು, ಚಿತ್ರ ಬರೆಯಬೇಕು ಎಂಬ ನಿಯಮ ಇಲ್ಲ. ಮಕ್ಕಳಿಗೆ ಚಿತ್ರಕಲೆ ಪಾಠ ಹೇಳಿದರೆ ಸಾಕು. ಆದರೆ, ಎ.ಎಸ್.ಶಂಕರೇಗೌಡ ಅವರು ವಿಶೇಷ ಆಸಕ್ತಿ ವಹಿಸಿದ್ದರಿಂದ ಶಾಲೆ ಗೋಡೆಗಳಲ್ಲಿ ಜಾಗೃತಿ ಮೂಡಿಸುವ ಚಿತ್ತಾರ ಮೂಡಿದೆ.
‘ಮುಖ್ಯ ಶಿಕ್ಷಕರ ಕಚೇರಿಯಲ್ಲಿ ಪೋಷಕರಿಗೆ ಮಾಹಿತಿ ನೀಡುವ ಚಿತ್ರ ಬಿಡಿಸಲು ತಯಾರಿ ನಡೆಯುತ್ತಿದೆ. ಶಾಲಾ ಕೊಠಡಿಗಳಲ್ಲಿಯೂ ಪಠ್ಯದ ಜೊತೆಗೆ ಜ್ಞಾನಾರ್ಜನೆ ನೀಡುವ ಮಾಹಿತಿಯೊಂದಿಗೆ ಚಿತ್ರ ಬಿಡಿಸುವ ಗುರಿ ಹೊಂದಲಾಗಿದೆ. ಪ್ರಾಯೋಜಕರು ಸಹಾಯ ಮಾಡಿದರೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಎಚ್.ಆರ್.ನಾಗರಾಜು.