ಆರೆಸ್ಸೆಸ್ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ತಲೆಮರೆಸಿ ಕೊಂಡಿದ್ದ ಪ್ರಮುಖ ಆರೋಪಿಯನ್ನು 5 ವರ್ಷಗಳ ಬಳಿಕ ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಅಜರ್ (41) ಬಂಧಿತ.
ಆರೋಪಿ ತನ್ನ ಸಹಚರರ ಜತೆ ಸೇರಿ 2019ರ ಡಿ.22ರಂದು ಜೆ.ಪಿ.ನಗರ ನಿವಾಸಿ, ಆರ್‌ಎಸ್‌ಎಸ್ ಕಾರ್ಯಕರ್ತ ವರುಣ್ ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ.
2019ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಸಿಎಎ ಹಾಗೂ ಎನ್‌ಆರ್‌ಸಿ ವಿಧೇಯಕದ ಪರ ಹಾಗೂ ವಿರೋಧಗಳು ವ್ಯಕ್ತವಾಗಿದ್ದವು. 2019ರ ಡಿ. 22 ನಗರದ ಟೌನ್ ಹಾಲ್ ಬಳಿ ನಡೆಸಿದ್ದ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ, ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು. ಕಾರ್ಯಕ್ರ ಮದಲ್ಲಿ ದಲ್ಲಿ ಭಾಗಿಯಾಗಿದ್ದ ವರುಣ್, ಕಾರ್ಯಕ್ರಮ ಮುಗಿಸಿ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು. ಆಗ ಜೆ.ಸಿ. ರಸ್ತೆಯಲ್ಲಿ ಅಡ್ಡಗಟ್ಟಿದ ಆರೋಪಿಗಳು ಚಾಕು, ಇತರ ಮಾರಕಾಸ್ತ್ರಗಳಿಂದ ವರುಣ್ ತಲೆ ಹಾಗೂ ಬೆನ್ನಿನ ಭಾಗಕ್ಕೆ ಇರಿದು ಪರಾರಿಯಾಗಿದ್ದರು.
ಕಲಾಸಿಪಾಳ್ಯ ಪೊಲೀಸರು, ಆರ್.ಟಿ.ನಗರ ಇರ್ಫಾನ್ ಅಲಿಯಾಸ್ ಮೊಹಮ್ಮದ್ ಇರ್ಫಾನ್ , ಸೈಯದ್ ಅಕ್ಬರ್ ಅಲಿಯಾಸ್ ಮೆಕ್ಯಾನಿಕ್ ಅಕ್ಬರ್, ಸನಾ, ಲಿಂಗರಾಜಪುರದ ಸೈಯ್ಯದ್ ಸಿದ್ದಿಕಿ, ಕೆ.ಜಿ.ಹಳ್ಳಿ ಅಕºರ್ ಅನ್ವರ್ ಬಾಷಾ, ಶಿವಾಜಿನಗರ ಸಾದಿಕ್ ಅಮೀನ್ ಎಂಬಾತನನ್ನು ಬಂಧಿಸಿದ್ದರು.
ದುಬೈನಿಂದ ಬಂದಿದ್ದ ಆರೋಪಿ ಪ್ರಕರಣ ದಾಖಲಾದ ಬಳಿಕ ದುಬೈಗೆ ಪರಾರಿಯಾಗಿದ್ದ. ಅಲ್ಲಿಂದ ಕೆಲ ತಿಂಗಳ ಹಿಂದೆ ವಾಪಸ್ ಬೆಂಗಳೂರಿಗೆ ಬಂದು, ಬಂಗಾರಪೇಟೆಯಲ್ಲಿರುವ ಪತ್ನಿಯ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ. ಈ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.