ಶಿಮ್ಲಾ: ರಾಜ್ಯಸಭಾ ಚುನಾವಣೆ ನಡೆದ ಬಳಿಕ ಹಿಮಾಚಲ ಪ್ರದೇಶದಲ್ಲಿ ಆಡಳಿತದಲ್ಲಿರುವ (Himachal Pradesh Congress Crisis) ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ.
ಹಿಮಾಚಲ ಪ್ರದೇಶದಲ್ಲಿ ಸಂಪೂರ್ಣ ಬಹುಮತವಿದ್ದರೂ ಸಹ ಕಾಂಗ್ರೆಸ್ ತನ್ನ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರನ್ನು ರಾಜ್ಯಸಭೆಯಲ್ಲಿ ಗೆಲ್ಲಿಸಲು ಅಸಾಧ್ಯವಾದ ಬೆನ್ನಲ್ಲೇ ಪರಿಸ್ಥಿತಿಯ ಲಾಭ ಪಡೆದುಕೊಂಡ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್‌ಗೆ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ.
ಕಾಂಗ್ರೆಸ್ ಶಾಸಕರು ಅಡ್ಡಮತ ಹಾಕಿದ ಪರಿಣಾಮ ಬಿಜೆಪಿಗೆ ಪ್ಲಸ್ ಆಗುತ್ತಿದ್ದಂತೆ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸಲು ವಿರೋಧ ಪಕ್ಷ ಬಿಜೆಪಿಯು ರಾಜ್ಯಪಾಲರ ಕದ ತಟ್ಟಿದೆ.
ಹಿಮಾಚಲ ಪ್ರದೇಶದಲ್ಲಿ ಭಿನ್ನಮತ ಹೆಚ್ಚುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ಭಿನ್ನಮತವನ್ನು ತಣ್ಣಗಾಗಿಸಿ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರನ್ನು ಅಧಿಕಾರದಿಂದ ಕೆಳಗಳಿಸಲು ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ ರಾಜ್ಯಸಭಾ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರನ್ನು ಸಿಎಂ ಸ್ಥಾನದಿಂದ ತೆಗೆದುಹಾಕಲು ಪಕ್ಷವು ಯೋಚಿಸುತ್ತಿದ್ದು, ಈ ಕುರಿತ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ತೆಗೆದುಕೊಳ್ಳಲಿದ್ದಾರೆ.