ಬೆಳಗಾವಿ: ಆಕಾಶದೆತ್ತರಕ್ಕೆ ತಲೆ ಎತ್ತಿ ವಿಮಾನವನ್ನು ನೋಡುತ್ತಿದ್ದ ವೃದ್ಧಾಶ್ರಮದ ಈ ಅಜ್ಜ, ಅಜ್ಜಿಯರು ಜೀವನದಲ್ಲಿಯೇ ಮೊದಲ ಬಾರಿಗೆ ವಿಮಾನವನ್ನೇ ಹತ್ತಿ ಮುಂಬೆ„ಗೆ ಪ್ರಯಾಣಿಸಿದಾಗ ಇವರ ಸಂತಸಕ್ಕೆ ಪಾರವೇ ಇರಲಿಲ್ಲ. ವಿಮಾನ ಹತ್ತಿದ ಕೂಡಲೇ ಹಿರಿ ಹಿರಿ ಹಿಗ್ಗಿ ಸಂಭ್ರಮಿಸಿದರು.
ಬೆಳಗಾವಿ ಸಮೀಪದ ಕಿಣಯೇ ಬಳಿಯ ಶಾಂತಾಯಿ ವೃದ್ಧಾಶ್ರಮದ ಈ ಅಜ್ಜ-ಅಜ್ಜಿಯರು ಇಳಿವಯಸ್ಸಿನಲ್ಲಿ ಗುರುವಾರ ಮಧ್ಯಾಹ್ನ 1:30ಕ್ಕೆ ಸ್ಟಾರ್ ಏರ್ ಜೆಟ್ ವಿಮಾನದಲ್ಲಿ ಪ್ರಯಾಣ ಬೆಳೆಸಿದರು. ಜೀವನದಲ್ಲಿಯೇ ಎಂದೂ ವಿಮಾನ ನೋಡಿರದ ಈ ಹಿರಿ ಜೀವಗಳು ಬದುಕಿನ ಕೊನೆಯ ಘಳಿಗೆಯಲ್ಲಿ ವಿಮಾನ ಹತ್ತಿ ತಮ್ಮ ಆಸೆ ಪೂರೈಸಿಕೊಂಡರು.
ಮುಂಬೈನ ಉದ್ಯಮಿ ಅನಿಲ್ ಜೈನ್ ಅವರ ಸಹಕಾರದಿಂದ ಎಲ್ಲರೂ ಮುಂಬೆ„ಗೆ ತೆರಳಿದರು. ಸ್ಟಾರ್ ಏರ್‌ಜೆಟ್ ಮಾಲೀಕ ಸಂಜಯ ಘೋಡಾವತ್ ಸೇರಿದಂತೆ ಅನೇಕ ದಾನಿಗಳ ಸಹಾಯದಿಂದಮುಂಬೈಗೆ ಪಯಣಿಸಲು ಸಾಧ್ಯವಾಯಿತು. ನಾಲ್ಕು ದಿನಗಳ ಕಾಲ ಮುಂಬೆ„ನಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಂಭ್ರಮಿಸಲಿದ್ದಾರೆ.
ವಿಮಾನ ಏರುವ ಮುನ್ನ ಕನ್ನಡ ಸಾಹಿತ್ಯ ಭವನದಲ್ಲಿ ಒಂದೇ ಬಣ್ಣದ ಸೀರೆ ಧರಿಸಿದ್ದ ಅಜ್ಜಿಯರು ವಿಜಯ ಸಂಕೇತ ತೋರಿಸಿದರು. ನಂತರ ಮಾತನಾಡಿದ ಅಜ್ಜಿಯರು, ನಾವು ಬಸ್, ರೈಲು ಹತ್ತಿ ಬೇರೆ ಬೇರೆ ಕಡೆಗೆ ಹೋಗಿದ್ದೇವೆ. ಆದರೆ ವಿಮಾನ ಹತ್ತುವುದು ಇದೇ ಮೊದಲ ಸಲ. ಬಹಳ ಸಂತಸವಾಗುತ್ತಿದೆ. ವಿಮಾನ ಏರಿ ಮುಂಬೆ„ಗೆ ಹೋಗಲು ಸಹಾಯ ಮಾಡಿರುವ ದಾನಿಗಳಿಗೆ ಪುಣ್ಯ ಹತ್ತಲಿ ಎಂದು ಪ್ರಾರ್ಥಿಸಿದರು.
ಸ್ವರ್ಗಕ್ಕೆ ಹೋದಷ್ಟು ಖುಷಿ…
ಅನಾಥಾಶ್ರಮದಲ್ಲಿ ನಮಗೆ ಎಲ್ಲ ಸೌಕರ್ಯಗಳು ಸಿಗುತ್ತಿವೆ. ವಿಮಾನ ಹತ್ತುವುದು ಎಂದರೆ ಸ್ವರ್ಗಕ್ಕೆ ಹೋಗುವಂತಾಗಿದೆ. ಮುಂಬೈನ ತಾಜ್ ಹೋಟೆಲ್ ದೇಶದ ಪ್ರತಿಷ್ಠಿತ ಹೋಟೆಲ್. ಈ ಹೋಟೆಲ್ ಒಳಗೆ ಕಾಲಿಡುವುದೇ ಸಂತಸ. ವೃದ್ಧಾಶ್ರಮಕ್ಕೆ ಬಂದಾಗಿನಿಂದ ನಮ್ಮ ಮನೆಯವರು ಯಾರು ಅಂತ ನೆನಪೂ ಆಗುತ್ತಿಲ್ಲ ಎನ್ನುತ್ತಾರೆ ಅಜ್ಜಿ