ಬೆಳಗಾವಿ: ಎಲ್ಲೆ ಇದ್ದರೂ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕೈ ಮುಗಿದು ಮುಂದಿನ ಕೆಲಸ ಆರಂಭಿಸುತ್ತೇನೆ. ಈ ಕ್ಷೇತ್ರಕ್ಕೆ ಒಳ್ಳೆಯ ಕೆಲಸ ತರುವುದೇ ನನ್ನ ಉದ್ದೇಶ. ಮೊದಲ ಬಾರಿಗೆ ಈ ಕ್ಷೇತ್ರದಿಂದ ಮಂತ್ರಿಯಾಗಿರುವ ಸೌಭಾಗ್ಯಕ್ಕಾಗಿ ನಾನು ಎಲ್ಲರಿಗೂ ಕೃತಜ್ಞಳಾಗಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಳೇಕುಂದ್ರಿ ಕೆ ಎಚ್ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ಮಂದಿರದ ನೂತನ ಕಟ್ಟಡದ ನಿರ್ಮಾಣಕ್ಕಾಗಿ ಶನಿವಾರ ಕಟ್ಟಡ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ಎಲ್ಲಿಯೇ ಹೋದರೂ ಭಾಷಣದ ಪೂರ್ವದಲ್ಲಿ ನನ್ನ ಕ್ಷೇತ್ರ, ನನ್ನ ಮತದಾರರು, ಸುಳೇಭಾವಿ ಮಹಾಲಕ್ಷ್ಮೀ, ಉಚಗಾಂವ ಮಳೇಕರಣಿ ದೇವಿಯನ್ನು ಸ್ಮರಿಸಿ ಭಾಷಣ ಮಾಡುತ್ತಿದ್ದೇನೆ. ಕ್ಷೇತ್ರದ ಜನರ ಆಶೀರ್ವಾದದಿಂದ ಇಂದು ರಾಜ್ಯದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಂದು ಕರೆಯುವಂತಾಗಿದೆ. ಮೊದಲು ನನಗೆ ನನ್ನ ಕ್ಷೇತ್ರ, ಆಮೇಲೆ ರಾಜ್ಯ. ದಿನ ಬೆಳಗಾದರೆ ಕ್ಷೇತ್ರಕ್ಕೆ ಎಷ್ಟು ಅನುದಾನ ತೆಗೆದುಕೊಂಡು ಹೋಗಲಿ, ಯಾವ ಇಲಾಖೆಯಿಂದ ತೆಗೆದುಕೊಂಡು ಹೋಗಲಿ ಎಂದು ಯೋಚಿಸುತ್ತೇನೆ ಎಂದರು.