ಮೈಸೂರು,ಫೆ.18- ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ತೆರವುಗೊಳಿಸಲಾಗಿದೆ.ಮೈಸೂರಿನ ನಜರ್ಬಾದ್ನಲ್ಲಿರುವ ಮಿನಿ ವಿಧಾನಸೌಧ ಹಿಂಭಾಗದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ತಲೆಯೆತ್ತಿದ್ದ ಕೆಲ ಮಳಿಗೆಗಳನ್ನು ನೆಲಸಮಗೊಳಿಸಲಾಗಿದೆ.
ಹಲವು ವರ್ಷಗಳಿಂದ ಅಕ್ರಮವಾಗಿ ಈ ಕಟ್ಟಡವನ್ನು ನಿರ್ಮಿಸಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ.
ಒಂದೇ ಸೂರಿನಡಿ ಐದು ಮಳಿಗೆಗಳನ್ನು ನಿರ್ಮಿಸಿ ಅದನ್ನು ಪತ್ರ ಬರಹಗಾರರ ಕಚೇರಿ, ಜೆರಾಕ್ಸ್ ಅಂಗಡಿ ಸೇರಿದಂತೆ ಕೆಲ ವಾಣಿಜ್ಯ ಚಟುವಟಿಕೆಗಳಿಗೆ ಬಾಡಿಗೆ ನೀಡಲಾಗಿತ್ತು. ಈ ಅಕ್ರಮ ಕಟ್ಟಡಕ್ಕೆ ಚೆಸ್ಕಾಂನಿಂದ ವಿದ್ಯುತ್ ಸಂಪರ್ಕವನ್ನು ಸಹ ನೀಡಲಾಗಿತ್ತು. ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರೂ ಯಾವೊಬ್ಬ ಅಧಿಕಾರಿಯೂ ಸಹ ಈ ಬಗ್ಗೆ ಗಮನಹರಿಸಿರಲಿಲ್ಲ.
ಮಹೇಶ್ ಕುಮಾರ್ ಅವರು ತಹಸಿಲ್ದಾರ್ ಆಗಿ ಬಂದ ನಂತರ ದಾಖಲೆಗಳನ್ನು ಪರಿಶೀಲಿಸಿ ಪೊಲೀಸರ ಭದ್ರತೆಯಲ್ಲಿ ಈ ಅಕ್ರಮ ಮಳಿಗೆಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸಿದ್ದಾರೆ. ಮತ್ತೊಂದು ವಿಶೇಷ ಎಂದರೆ ತಹಸಿಲ್ದಾರ್ ಕಚೇರಿ, ಲೋಕೋಪಯೋಗಿ ಇಲಾಖೆ, ಭೂಮಾಪನಾಕಾರಿಗಳ ಕಚೇರಿ ಸೇರಿದಂತೆ ವಿವಿಧ ಸರಕಾರಿ ಕಚೇರಿಗಳ ಮಧ್ಯದಲ್ಲಿಯೇ ಹಲವಾರು ವರ್ಷಗಳಿಂದ ಈ ಅಕ್ರಮ ಕಟ್ಟಡ ತಲೆಯೆತ್ತಿತ್ತು.