
ಅದು ಡಿಸೆಂಬರ್ 10ರ ಮಧ್ಯರಾತ್ರಿ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಅದೊಬ್ಬ ಮಹಿಳೆಯನ್ನ ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡ್ತಿದ್ದರು. ಈ ವೇಳೆ ಕಾಕತಿ ಠಾಣೆ ಪೊಲೀಸರ 112ಗೆ ಗ್ರಾಮಸ್ಥರೊಬ್ಬರು ಕರೆ ಮಾಡಿ ಘಟನೆ ಕುರಿತು ಹೇಳಿದ್ದಾರೆ, ಹೀಗೆ ಕರೆ ಬಂದ ಹದಿನೈದು ನಿಮಿಷದಲ್ಲಿ 112 ವಾಹನ ಸಮೇತ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳಾದ ಸುಭಾಷ ಬಿಲ್ ಮತ್ತು ವಿಠ್ಠಲ ಪಟ್ಟೇದ ಸ್ಥಳಕ್ಕೆ ಹೋಗಿದ್ದಾರೆ.
ಈ ವೇಳೆ ಮಹಿಳೆಯ ಸ್ಥಿತಿ ಕಂಡು ಶಾಕ್ ಆಗಿದ್ದಾರೆ, ಕೂಡಲೇ ಅಲ್ಲಿದ್ದ ಆರೋಪಿಗಳಿಗೆ ಅವಾಜ್ ಹಾಕಿ ತಡೆಯುವ ಕೆಲಸ ಮಾಡಿದ್ದಾರೆ. ಇದೇ ವೇಳೆ ಘಟನೆ ಕೈಮೀರಬಾರದು ಅನ್ನೋ ಕಾರಣಕ್ಕೆ ಕೂಡಲೇ ಪಿಎಸ್‌ಐ ಮಂಜುನಾಥ್ ಹುಲಕುಂದ ಗೆ ಕರೆ ಮಾಡಿದ ಸಿಬ್ಬಂದಿ ಘಟನೆ ಕುರಿತು ಹೇಳಿದ್ದಾರೆ. ಇದಾದ ಬಳಿಕ ಇಬ್ಬರೂ ಪೊಲೀಸ್ ಕಾನ್ಸ್ಟೇಬಲ್ಗಳು ಮೊಟ್ಟಮೊದಲ ಕೆಲಸವಾಗಿ ಮಹಿಳೆಯ ಮನೆಗೆ ಓಡಿ ಹೋಗಿ ಸೀರೆಯೊಂದನ್ನ ತಂದು ಆ ತಾಯಿಗೆ ನೀಡಿ ಮಾನ ಮುಚ್ಚುವ ಕೆಲಸ ಮಾಡಿದ್ದಾರೆ.