ಬೆಂಗಳೂರು,: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah)ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಮುಕ್ತಾಯವಾಗಿದೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಚ್ಕೆ ಪಾಟೀಲ್, ವಿಶೇಷ ವಿವಾಹ ಕರ್ನಾಟಕ ತಿದ್ದುಪಡಿ ನಿಯಮಗಳು 2024ಕ್ಕೆ ಅನುಮೋದನೆ ನೀಡಿದ್ದು, ಈ-ಮೇಲ್ ಮೂಲಕವೂ ಕೂಡ ವಿವಾಹ ನೊಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. 45% ನಷ್ಟು ಮೇಲ್ಮಟ್ಟದ ಹುದ್ದೆಗಳು ಇನ್ನೂ ಖಾಲಿ ಇವೆ. ಅದನ್ನು ಭರ್ತಿ ಮಾಡಲು ಕ್ಯಾಬಿನೆಟ್ನಿಂದ ತೀರ್ಮಾನ ಮಾಡಲಾಗಿದೆ. ಕೆಎಎಸ್ (ಸೂಪರ್ ಟೈಮ್ ಸ್ಕೇಲ್) ಮತ್ತು ಕೆಎಎಸ್ (ಆಯ್ಕೆ ಶ್ರೇಣಿ) ಮುಂಬಡ್ತಿಗೆ ನಿಗದಿಪಡಿಸಿರುವ ಕನಿಷ್ಠ ಅರ್ಹತಾದಾಯಕ ಸೇವೆಯನ್ನು ಕಡಿಮೆಗೊಳಿಸುವ ಸಂಬಂಧ ಕರ್ನಾಟಕ ಆಡಳಿತ ಸೇವೆಗಳು ನೇಮಕಾತಿ ತಿದ್ದುಪಡಿ ನಿಯಮಗಳು 2024ಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಬೀದರ್ ಜಿಲ್ಲೆ ಬಸವಕಲ್ಯಾಣ ನಗರದಲ್ಲಿ ನೂತನ 4 ಕೋರ್ಟ್ ಹಾಲ್ಗಳ ನ್ಯಾಯಾಲಯ ಸಂಕೀರ್ಣವನ್ನ 17.50 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದಿಸಲಾಗಿ ಎಂದು ತಿಳಿಸಿದ್ದಾರೆ.
ಇವತ್ತು ಸಿಎಂ ಜನಸ್ಪಂದನ ಮಾಡಿದರು. ಇದರಲ್ಲಿ 25 ಸಾವಿರಕ್ಕೂ ಹೆಚ್ಚು ಜನ ಬಂದಿದ್ದರು. 12,423 ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ 3250, ವಸತಿ ಇಲಾಖೆಗೆ 1500, ಸಮಾಜ ಕಲ್ಯಾಣ ಇಲಾಖೆಗೆ 1065, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ 509 ಅರ್ಜಿಗಳು ಬಂದಿದ್ದವು. ಜನಸ್ಪಂದನ ಅತ್ಯಂತ ಪರಿಣಾಮಕಾರಿಯಾಗಿ ಫಲಶೃತಿ ನೀಡುವ ಕಾರ್ಯಕ್ರಮ ಆಗಿದೆ.
2015 ರ ವಿಧೇಯಕ ವಾಪಸ್
ಕರ್ನಾಟಕ ಕುಲಾಂತರಿ ಮತ್ತು ತಳಿ ವಿಜ್ಞಾನದ ಪ್ರಕಾರ ಮಾರ್ಪಾಟಾದ ಹತ್ತಿ ಬೀಜಗಳ ಮಾರಾಟ ಬೆಲೆಯ ನಿಗದಿ ಮತ್ತು ಪರಿಹಾರದ ಸಂದಾಯ ವಿಧೇಯಕ 2015 ನ್ನು ಇಂದಿನ ಕ್ಯಾಬಿನೆಟ್ನಲ್ಲಿ ಹಿಂಪಡೆಯಲಾಗಿದೆ. ಕೇಂದ್ರ ಕೂಡ ಇದೇ ಮಾದರಿಯ ವಿಧೇಯಕ ಮಂಡನೆ ಮಾಡಲು ತಯಾರಿ ನಡೆಸಿದೆ. ಹೀಗಾಗಿ ಕೇಂದ್ರದ ಕೋರಿಕೆ ಮೇರೆಗೆ 2015 ರ ವಿಧೇಯಕ ವಾಪಸ್ ಪಡೆಯಲು ಕ್ಯಾಬಿನೆಟ್ ತೀರ್ಮಾನ ಮಾಡಿದೆ.
6.5 ಎಕರೆ ಜಾಗದಲ್ಲಿ ಯುನಿಟಿ ಮಾಲ್ ನಿರ್ಮಾಣ
ಒಂದು ಜಿಲ್ಲೆ ಒಂದು ಉತ್ಪನ್ನ, ಜಿಐ ಉತ್ಪನ್ನಗಳು ಹಾಗೂ ಇತರೆ ಕರಕುಶಲ ಉತ್ಪನ್ನಗಳನ್ನು ಉತ್ತೇಜಿಸಲು ರಾಜ್ಯದಲ್ಲಿ ಯುನಿಟಿ ಮಾಲ್ ಅನ್ನು ಕೇಂದ್ರ ಸರ್ಕಾರವು ನೀಡುವ 193 ಕೋಟಿ ರೂ. ಬಡ್ಡಿರಹಿತ ಸಾಲದ ನೆರವಿನೊಂದಿಗೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮೈಸೂರಿನಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರ ವ್ಯಾಪ್ತಿಯಲ್ಲಿ 6.5 ಎಕರೆ ಜಾಗದಲ್ಲಿ ಯುನಿಟಿ ಮಾಲ್ ನಿರ್ಮಾಣ ಮಾಡುತ್ತೇವೆ ಎಂದರು.