ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಆರೋಪಿಸಿ ದಿಲ್ಲಿಯಲ್ಲಿ ಹೋರಾಟ ಕ್ಕಿಳಿಯಲು ನಿರ್ಧರಿಸಿರುವ ರಾಜ್ಯ ಕಾಂಗ್ರೆಸ್ ಫೆ. 7ರಂದು ಸಂಸತ್ ಭವನದ ಎದುರು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದೆ. ಜತೆಗೆ, “ನನ್ನ ತೆರಿಗೆ ನನ್ನ ಹಕ್ಕು” ಅಭಿಯಾನಕ್ಕೂ ಬೆಂಬಲ ಸೂಚಿಸಿದೆ.
ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಕೂಗೆಬ್ಬಿಸಿದ ಸಂಸದ ಡಿ.ಕೆ. ಸುರೇಶ್ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಇದರಿಂದ ಪಕ್ಷಕ್ಕಾಗಿರುವ ಮುಜುಗರವನ್ನೂ ತಪ್ಪಿಸಬೇಕಾದ ಅನಿವಾರ್ಯಕ್ಕೆ ಕಾಂಗ್ರೆಸ್ ಸಿಲುಕಿದೆ. ಅಲ್ಲದೆ ಲೋಕ ಸಭೆ ಚುನಾವಣೆ ಸನ್ನಿಹಿತವಾಗುತ್ತಿರು ವುದರಿಂದ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಮುಂದಾಗಿದೆ. ಅದರಂತೆ ಬುಧವಾರ ದಿಲ್ಲಿಯಲ್ಲಿ ದೊಡ್ಡಮಟ್ಟದ ಪ್ರತಿ ಭಟನೆ ನಡೆಯಲಿದ್ದು, ಅದರಲ್ಲಿ ಭಾಗಿಯಾಗುವಂತೆ ಪಕ್ಷದ ಶಾಸಕರು, ವಿಧಾನಪರಿಷತ್ತಿನ ಸದಸ್ಯರೆಲ್ಲರಿಗೂ ಆಹ್ವಾನ ಕೊಟ್ಟಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಶಿವಕುಮಾರ್, ಮಂಗಳವಾರವೇ ಎಲ್ಲರೂ ದಿಲ್ಲಿಯಲ್ಲಿ ಹಾಜರಿರುವಂತೆ ತಾಕೀತು ಮಾಡಿದ್ದಾರೆ.