ಬೆಂಗಳೂರು,ಫೆ.3- ರಾಜಕೀಯ ಪ್ರವೇಶ ಮಾಡುವ ಆಲೋಚನೆ ಮಾಡಿಲ್ಲ ಎಂದು ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ವೃತ್ತಿಯಲ್ಲಿ ಮುಂದುವರೆಯುವುದಾಗಿ ಹೇಳಿದರು.
ರಾಜಕೀಯ ಪ್ರವೇಶ ಅಥವಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಊಹಾಪೋಹವನ್ನು ಅವರು ಅಲ್ಲೆಗೆಳೆದರು.
ಕೆಂಪೇಗೌಡ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡುವ ಉದ್ದೇಶವನ್ನು ಒಕ್ಕಲಿಗರ ಸಂಘ ಹೊಂದಿದ್ದು, ಅದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಒಕ್ಕಲಿಗರ ಸಂಘದ ಕೋರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಹೃದಯ ಭಾಗದಲ್ಲಿ ಕೆಂಪೇಗೌಡ ಆಸ್ಪತ್ರೆ ಇದೆ. ಅದರ ಅಭಿವೃದ್ಧಿಗೆ ಉಪಯುಕ್ತ ಸಲಹೆ ಕೊಡಲು ಸಂತೋಷವಾಗುತ್ತದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಬೇಕು. ಸಲಹೆಗಳೇ ಅತ್ಯಂತ ಬದಲಾವಣೆ ತರುತ್ತವೆ ಎಂದು ಮಂಜುನಾಥ್ ತಿಳಿಸಿದರು.
ಜಯದೇವ ಆಸ್ಪತ್ರೆಯ ನಿರ್ದೇಶಕ ಸ್ಥಾನದಿಂದ ನಿವೃತ್ತಿಯಾದ ನಂತರ ಹಲವು ಸಂಘಸಂಸ್ಥೆಗಳು ಪ್ರೀತಿ, ಅಭಿಮಾನದಿಂದ ಸನ್ಮಾನಿಸುತ್ತಿವೆ. ರಾಜ್ಯ ಒಕ್ಕಲಿಗರ ಸಂಘವು ಇಂದು ದೊಡ್ಡ ಮಟ್ಟದಲ್ಲಿ ನನ್ನನ್ನು ಸನ್ಮಾನಿಸಿದೆ. ಈ ಸನ್ಮಾನದಿಂದ ಸಂತೋಷವಾಗಿದೆ ಎಂದರು.
ಕಿಮ್ಸ್ ಆಸ್ಪತ್ರೆ ಸಂಪೂರ್ಣ ಜವಾಬ್ದಾರಿಗೆ ಮನವಿ: ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ ಮಾತನಾಡಿ, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ, ಕೆಂಪೇಗೌಡ ಆಸ್ಪತ್ರೆ, ಸಂಘದ ಅೀಧಿನದಲ್ಲಿರುವ ವೈದ್ಯಕೀಯ ವಿದ್ಯಾಲಯಗಳು ಆಸ್ಪತ್ರೆಗಳು ಸೇರಿದಂತೆ ಮುಂದಿನ ದಿನಗಳಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಪೂರ್ಣ ಜವಾಬ್ದಾರಿ ಅಥವಾ ಮೇಲು ಉಸ್ತುವಾರಿಯನ್ನು ಡಾ.ಮಂಜುನಾಥ್ ಅವರಿಗೆ ನೀಡಲು ಜ.31ರಂದು ನಡೆದ ಸಮಿತಿ ಸಭೆಯಲ್ಲಿ ಒಮ್ಮತ ತೀರ್ಮಾನ ಮಾಡಲಾಗಿದೆ.
ವಿಶೇಷ ಅನುಭವವುಳ್ಳ ಮಂಜುನಾಥ್ ಅವರು ತುಂಬು ಮನಸ್ಸಿನಿಂದ ನಮ್ಮ ಮನವಿಯನ್ನು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ. ನಮ್ಮ ಸಂಘದ ಸಂಸ್ಥೆಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಹಾಗೂ ಹೊಸ ವೈದ್ಯಕೀಯ ಸೌಲಭ್ಯಗಳನ್ನು ಪ್ರಾರಂಭಿಸಲು ಅವರ ಅನುಭವ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದೆ. ಅವರ ಅನುಭವದ ಸದುಪಯೋಗವನ್ನು ಪಡೆದುಕೊಳ್ಳಲು ಸಂಘದ ಆಡಳಿತ ಮಂಡಳಿಯು ಉತ್ಸುಕವಾಗಿದ್ದು, ಈ ಸಂಬಂಧ ಅವರಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.