ಬೆಂಗಳೂರು : ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಾಲಾಕಾಲೇಜುಗಳಲ್ಲಿ ಸಂವಿಧಾನ ಓದು (Constitution reading) ಎಂಬ ಹೊಸ ಕ್ರಮವನ್ನು ಜಾರಿಗೊಳಿಸಿದೆ. ವಿದ್ಯಾರ್ಥಿಗಳಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರ (Dr BabaSaheb Ambedkar) ಸಂವಿಧಾನದ ಬಗ್ಗೆ ಅರಿವು ಮತ್ತು ಗೌರವ ಮೂಡಿಸುವ ಸಲುವಾಗಿ ಪ್ರಾರಂಭಿಸಿರುವ ಈ ಕಾರ್ಯಕ್ರಮದಲ್ಲಿ ಆರು ವರ್ಷದ ಬಾಲೆಯೊಬ್ಬಳು ಸ್ಪಷ್ಟವಾಗಿ ಸಂವಿಧಾನದ ಪ್ರಸ್ತಾವನೆಯನ್ನು ಕಂಠಪಾಠದ ಮೂಲಕ ಓದಿ ಜನರ ಮೆಚ್ಚುಗೆ ಗಳಿಸಿದ್ದಾಳೆ.
ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಈ ಬಾಲೆಯ ವಿಡಿಯೋವನ್ನು ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದು, ಬಾಲಕಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚಿತ್ತಾಪುರಿನ (Chittapur) ಹಳಕಟ್ಟಾ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾದಲ್ಲಿ (Constitution awareness rally) ಒಂದನೇ ತರಗತಿಯ ಪುಟ್ಟ ಬಾಲೆ ಸಂವಿಧಾನ ಪ್ರಸ್ತಾವನೆಯನ್ನು ನಿರರ್ಗಳವಾಗಿ ಹೇಳಿದ್ದಾಳೆ. ನನ್ನ ಬಯಕೆಯ ಸಮ ಸಮಾಜದ ಪ್ರಬುದ್ಧ ಚಿತ್ತಾಪುರದ ಸಾಕಾರವನ್ನು ಈ ಮಗುವಿನಲ್ಲಿ ಕಾಣುತ್ತಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಜೊತೆಗೆ, ಈ ಮಗುವನ್ನು ದಿಕ್ಸೂಚಿಯಾಗಿಟ್ಟುಕೊಂಡು ಗುರುಬಸವಣ್ಣನವರ ಹಾಗೂ ಸಂವಿಧಾನದ ಆಶಯಗಳನ್ನು ಪಾಲಿಸಲು ಪ್ರಮಾಣ ಮಾಡೋಣ ಪ್ರಿಯಾಂಕ್ ಖರ್ಗೆ ಕರೆ ನೀಡಿದ್ದಾರೆ.