ರಾಯಚೂರು: ಮದ್ಯ ಸೇವಿಸಲು ಹಣ ನೀಡದ ಪತ್ನಿಯನ್ನು ಭೀಕರವಾಗಿ ಪತಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ನಡೆದಿದೆ. ಸುನಿತಾ (28) ಪತಿಯ ಕೈಯಿಂದ ಹತ್ಯೆಯಾದ ಗೃಹಿಣಿಯಾಗಿದ್ದು, ಬಸವರಾಜ ಕಂಬಳಿ ಕೊಲೆ ಮಾಡಿರುವ ಪತಿ.
ಬಸವರಾಜ ಹಾಗೂ ಸುನಿತಾ ಮನಸಾರೆ ಪರಸ್ಪರ ಪ್ರೀತಿಸಿ 2014ರಲ್ಲಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದರು. ಭಾನುವಾರದಂದು ಸಂಜೆ ಸುನಿತಾ ತಮ್ಮ ಹೊಲದಲ್ಲಿ ನೀರು ಕಟ್ಟುತ್ತಿದ್ದರು. ಆಗ ಪತಿ ಬಸವರಾಜ ಹೊಲಕ್ಕೆ ಬಂದು ಮದ್ಯ ಸೇವನೆಗೆ ಹಣವನ್ನು ಕೇಳಿದ್ದಾನೆ. ಪತ್ನಿ ಹಣ ಕೊಡಲು ನಿರಾಕರಿಸಿದ್ದಾಳೆ. ಆಗ ಅಲ್ಲಿಯೇ ಇದ್ದ ಸಲಿಕೆಯಿಂದ ಬಲಗಣ್ಣಿನ ಭಾಗಕ್ಕೆ ಗಂಭೀರ ಹಲ್ಲೆ ಮಾಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡು ರಕ್ತಸ್ರಾವ ಉಂಟಾಗಿ ಸುನಿತಾ ಮೃತಪಟ್ಟಿದ್ದಾರೆ. ಕೊಲೆ ಮಾಡಿದ ಪತಿ ಬಸವರಾಜ ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಮ್ಮಕ್ಕಿನಿಂದ ಕೊಲೆ-ಆರೋಪ: ಈ ಕೊಲೆ ಮಾಡುವುದಕ್ಕೆ ಬಸವರಾಜನ ತಂದೆ ದೇವಪ್ಪ ಕಂಬಳಿ (ಕೊಲೆಯಾದ ಸುನಿತಾಳ ಮಾವ), ದ್ಯಾಮವ್ವ(ಅತ್ತೆ), ಶಿವಪುತ್ರ(ಬಸವರಾಜ ಅಣ್ಣ) ಕುಮ್ಮಕ್ಕು ನೀಡಿದ್ದಾರೆ ಎಂದು ಮೃತಳ ಸಂಬಂಧಿ ಈರಪ್ಪ ನೀಡಿದ ದೂರಿನ ಮೇರೆಗೆ, ಆರೋಪಿಗಳ ಮೇಲೆ ಐಪಿಸಿ ಕಲಂ 504, 506, 109, 302 ಸಹಿತ 34ರ ಅಡಿಯಲ್ಲಿ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಿಂದಿನ ಪ್ರಕರಣ: ಆಸ್ತಿಗೆ ಸ್ವಂತ ಅಳಿಯನ ಹತ್ಯೆ: ಹುಬ್ಬಳ್ಳಿಯಲ್ಲಿ ಆಸ್ತಿ ವಿಚಾರವಾಗಿ ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಸ್ವಂತ ಅಳಿಯ ನಿಂಗಪ್ಪನನ್ನು ತಂದೆ ಮಗ ಭೀಕರವಾಗಿ ಹತ್ಯೆಗೈಯ್ದಿದ್ದ ಘಟನೆ ನವೆಂಬರ್ 22 ಕ್ಕೆ ನಡೆದಿತ್ತು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದ ಲಿಂಗರಾಜ ಸರ್ಕಲ್ ಬಳಿ ನಿಂಗಪ್ಪನನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಘಟನೆ ನಡೆದ 24 ಗಂಟೆಯಲ್ಲೇ ಕಲಘಟಗಿ ಠಾಣಾ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದರು.
ಕೋಲಾರದಲ್ಲಿ ಸೆಕ್ಯೂರಿಟಿ ಗಾರ್ಡ್ ಹತ್ಯೆ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿ ಬಳಿ ನವೆಂಬರ್ 25 ರಂದು ಹಳೆ ದ್ವೇಷದ ಹಿನ್ನೆಲೆ ಮಚ್ಚಿನಿಂದ ಕೊಚ್ಚಿ ಸೆಕ್ಯುರಿಟಿ ಗಾರ್ಡ್ ಮಂಜುನಾಥ್ (48)ನನ್ನು ಕೊಲೆ ಮಾಡಲಾಗಿತ್ತು. ಮುಳಬಾಗಿಲು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.