ಮುಂಬೈ: ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿಂದು ಭಾರತ-ನ್ಯೂಜಿಲೆಂಡ್ ತಂಡಗಳ ನಡುವೆ ಸೆಮಿ ಫೈನಲ್ ಪಂದ್ಯ ನಡೆಯಲಿದೆ. ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣ ಈ ರೋಚಕ ಹಣಾಹಣಿಗೆ ಆತಿಥ್ಯ ವಹಿಸುತ್ತಿದೆ. ಜಗತ್ತಿನೆಲ್ಲೆಡೆಯ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯವನ್ನು ಎದುರು ನೋಡುತ್ತಿದ್ದು, ಭಾರತದ ಗೆಲುವಿಗಾಗಿ ಪೂಜೆ-ಪ್ರಾರ್ಥನೆಯಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ಸಾವಿರಾರು ಪ್ರೇಕ್ಷಕರೊಂದಿಗೆ ಕ್ರೀಡಾಂಗಣದಲ್ಲೇ ಕುಳಿತು ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ತಮಿಳಿನ ಖ್ಯಾತ ನಟ ರಜಿನಿಕಾಂತ್ ಕೂಡಾ ಉತ್ಸುಕರಾಗಿದ್ದಾರೆ.
ರಜಿನಿಕಾಂತ್ ಮಾತ್ರವಲ್ಲ, ಪ್ರಸಿದ್ಧ ಮಾಜಿ ಫುಟ್‌ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್, ಉದ್ಯಮಿ ನೀತಾ ಅಂಬಾನಿ ಸೇರಿದಂತೆ ಹಲವರು ಇಂದು ಪ್ರೇಕ್ಷಕರ ಗ್ಯಾಲರಿಯಲ್ಲಿ ಕಂಡುಬರಲಿದ್ದಾರೆ.
ಮಂಗಳವಾರ ‘ಜೈಲರ್’ ಸ್ಟಾರ್ ರಜಿನಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ನಾನು ಪಂದ್ಯ ವೀಕ್ಷಿಸಲು ತೆರಳುತ್ತಿದ್ದೇನೆ” ಎಂದರು.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ರಜಿನಿಕಾಂತ್ ಅವರಿಗೆ ಗೋಲ್ಡನ್ ಟಿಕೆಟ್ ನೀಡಿ ಪಂದ್ಯ ವೀಕ್ಷಿಸಲು ಅವಕಾಶ ನೀಡಿದ್ದಾರೆ. ಇಂದು ಬೆಳಿಗ್ಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿ, “ರಜಿನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಪಂದ್ಯ ವೀಕ್ಷಿಸಲಿದ್ದಾರೆ. ಅಲ್ಲು ಅರ್ಜುನ್ ಸಹ ಬಂದು ವಿಶ್ವಕಪ್ ಸೆಮಿಫೈನಲ್ ವೀಕ್ಷಿಸುವ ನಿರೀಕ್ಷೆಯಲ್ಲಿದ್ದೇವೆ” ಎಂದರು.
ಡೇವಿಡ್ ಬೆಕ್‌ಹ್ಯಾಮ್ ಸಹ ಪಂದ್ಯಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ಪ್ರಸ್ತುತ UNICEF ಗುಡ್‌ವಿಲ್ ರಾಯಭಾರಿಯಾಗಿರುವ ಬೆಕ್‌ಹ್ಯಾಮ್, ಮಕ್ಕಳ ಹಕ್ಕುಗಳು ಮತ್ತು ಲಿಂಗ ಸಮಾನತೆ ಮಹತ್ವವನ್ನು ಪ್ರತಿಪಾದಿಸಲು ಭಾರತದಲ್ಲಿದ್ದಾರೆ. ಇನ್ನುಳಿದಂತೆ ನಟರಾದ ಸಲ್ಮಾನ್ ಖಾನ್, ಅಮೀರ್ ಖಾನ್ ಮತ್ತು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಸಹ ಇಂದಿನ ಪಂದ್ಯ ವೀಕ್ಷಿಸಲು ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಖ್ಯಾತನಾಮರು ಟೀಮ್ ಇಂಡಿಯಾವನ್ನು ಹುರಿದುಂಬಿಸಲಿದ್ದು, ಇಂದಿನ ಮ್ಯಾಚ್ ಮೇಲೆ ಎಲ್ಲರ ಗಮನ ನೆಟ್ಟಿದೆ.