ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾದ ಸಂದರ್ಭದಲ್ಲಿ ‘ಹತ್ತಾರು ವರ್ಷಗಳಿಂದ ಬಿಜೆಪಿಯನ್ನು ಕರ್ನಾಟಕದಲ್ಲಿ ಭದ್ರವಾದ ಬುನಾದಿಯ ಮೇಲೆ ಕಟ್ಟಲು ಯಡಿಯೂರಪ್ಪ ಶ್ರಮಿಸಿದ್ದಾರೆ ಎಂದು ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು ಹೇಳಿದ್ದಾರೆ.
ರಾಜ್ಯ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರನ್ನು ಅವರ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದರು. ಇದೇ ವೇಳೆ, ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ಎಂ.ಕೃಷ್ಣ ಅವರು, ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.
ಬಳಿಕ, ಯಡಿಯೂರಪ್ಪ ಅವರು ಕಟ್ಟಿದ ಅಸ್ಥಿಭಾರದ ಮೇಲೆ ವಿಜಯೇಂದ್ರ ಅವರು ಬೃಹತ್ ಪಕ್ಷವನ್ನು ಕಟ್ಟುವ ಹಾಗೂ ಮುಂದಿನ ಲೋಕಸಭಾ ಚುನಾವಣೆ, ನಂತರ ಬರುವ ಸ್ಥಳೀಯ ಚುನಾವಣೆಗಳಲ್ಲಿ ತಮ್ಮ ಛಾಪನ್ನು ಒತ್ತಿ ತೋರಿಸುವ ದೊಡ್ಡ ಜವಾಬ್ದಾರಿ ಹೊರಲಿದ್ದಾರೆ. ಈ ಯುವ ಹೆಗಲಿನ ಮೇಲೆ ಅಂಥ ಹೊಣೆ ನೀಡಲಾಗಿದೆ. ಈ ಪ್ರತಿಭೆ ಗುರುತಿಸಿ, ಪ್ರಧಾನಿ ನರೇಂದ್ರ ಮೋದಿಯವರು, ಗೃಹ ಸಚಿವ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾರವರು ಮಹತ್ವದ ಹೊಣೆ ನೀಡಿದ್ದಾರೆ. ವಿಜಯೇಂದ್ರರಿಗೆ ಎಲ್ಲ ವಿಧದ ಯಶಸ್ಸು ಸಿಗಲಿ ಎಂದು ಹಾರೈಸುವುದಾಗಿ ತಿಳಿಸಿದರು.
Laxmi News 24×7