Breaking News

ಮಹಾರಾಷ್ಟ್ರದ ಜತ್ತ ಪಟ್ಟಣದ ಸಮೀಪ ಕೆಲವು ದುಷ್ಕರ್ಮಿಗಳು ಕೆಎಸ್​ಆರ್‌ಟಿಸಿ ಬಸ್‌ಗೆ ಕಲ್ಲು ತೂರಿದ್ದಾರೆ.

Spread the love

ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ.

ಮತ್ತೊಂದೆಡೆ, ಮಹಾರಾಷ್ಟ್ರದ ಜತ್ತ ಪಟ್ಟಣದ ಸಮೀಪ ಕೆಲ ದುಷ್ಕರ್ಮಿಗಳು ಕೆಎಸ್​ಆರ್​ಟಿಸಿ ಬಸ್​ಗೆ ಕಲ್ಲು ತೂರಿರುವ ಘಟನೆ ನಡೆದಿದೆ. ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ವಿಜಯಪುರ ತಾಲೂಕಿನ ಇಂಡಿ ಘಟಕಕ್ಕೆ ಸೇರಿದ ಬಸ್​ ಇದಾಗಿದ್ದು, ಜತ್ತ ಪಟ್ಟಣದಿಂದ ವಿಜಯಪುರಕ್ಕೆ ತೆರಳುತ್ತಿತ್ತು.

ದುಷ್ಕರ್ಮಿಗಳು ಬಸ್​ ಅಡ್ಡಗಟ್ಟಿ ಕಲ್ಲು ತೂರಿದ್ದಾರೆ. ಬಸ್​ನ ಹಿಂಬದಿಯ ಗಾಜು ಪುಡಿಯಾಗಿದೆ. ಗಾಜಿನ ಚೂರುಗಳು ಪ್ರಯಾಣಿಕರಿಗೆ ತಾಗಿ ಗಾಯಗಳಾಗಿವೆ.

ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಇಂದು ಜತ್ತ ಪಟ್ಟಣ ಬಂದ್​ ಮಾಡಲಾಗಿದೆ. ಚಿಕ್ಕೋಡಿ ವಿಭಾಗದಿಂದ ಮಹಾರಾಷ್ಟ್ರದ ಕೊಲ್ಹಾಪುರ, ಸಾತಾರಾ, ಮುಂಬೈ, ವಿಶಾಲಗಡ್, ಇಚಲಕರಂಜಿ, ಮಿರಜ್ ಸೇರಿದಂತೆ ಇತರೆ ಭಾಗಗಳಿಗೆ ತೆರಳುವ ಕೆಎಸ್‌ಆರ್​ಟಿಸಿ ಬಸ್​ಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. NWKRTC ವಿಭಾಗದಿಂದ ಮಹಾರಾಷ್ಟ್ರಕ್ಕೆ ಪ್ರತಿನಿತ್ಯ ಸಂಚರಿಸುತ್ತಿದ್ದ 215ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಸದ್ಯ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದವರೆಗೆ ಮಾತ್ರ ಬಸ್‌ಗಳು ಸಂಚಾರ ಮಾಡುತ್ತಿವೆ. ಕೊಲ್ಹಾಪುರಕ್ಕೆ ತೆರಳುವ ಬಸ್‌ಗಳು ನಿಪ್ಪಾಣಿವರೆಗೆ, ಮಿರಜ್​ಗೆ ತೆರಳುವ ಬಸ್‌ಗಳು ಕಾಗವಾಡವರೆಗೆ, ಇಚಲಕರಂಜಿಗೆ ತೆರಳುವ ಬಸ್‌ಗಳು ಬೋರಗಾಂವವರೆಗೆ ಮಾತ್ರ ಸಂಚಾರ ಮಾಡಲಿವೆ ಎಂದು NWKRTC ಡಿಸಿ ಮಹಾದೇವ ಮುಂಜಿ ಮಾಹಿತಿ ನೀಡಿದರು.

ಮತ್ತೊಂದೆಡೆ, ಬೆಂಗಳೂರಿನಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್​ಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್‌ಆರ್​ಟಿಸಿ ತಿಳಿಸಿದೆ‌. ಬೆಂಗಳೂರಿನಿಂದ ಹೊರಡಬೇಕಿದ್ದ ಶಿರಡಿ, ಮುಂಬೈ, ಪುಣೆ ಬಸ್​ಗಳನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರು ಗಮನಿಸಬೇಕು ಎಂದು ಸಾರಿಗೆ ಸಂಸ್ಥೆ ಮನವಿ ಮಾಡಿದೆ.

ಕರ್ನಾಟಕದ ಬಸ್​ಗೆ ಬೆಂಕಿ: ಸೋಮವಾರ ಬೀದರ್​ ಜಿಲ್ಲೆಯ ಭಾಲ್ಕಿಯಿಂದ ಪುಣೆಗೆ ಹೊರಟಿದ್ದ ಕೆಎ-38 ಎಫ್-1201 ಸಂಖ್ಯೆ ಬಸ್‌ಗೆ ಮಹಾರಾಷ್ಟ್ರದ ಉಮರ್ಗಾ ಬಳಿಯ ತರುರಿ ಗ್ರಾಮದಲ್ಲಿ ಬೆಂಕಿ ಹಚ್ಚಲಾಗಿತ್ತು. ಪ್ರತಿಭಟನಾಕಾರರು ಬಸ್ ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಬೆಂಕಿ ಹಚ್ಚಿದ್ದರು. ತುಳಜಾಪುರ ಯಾತ್ರೆ ಸೇರಿದಂತೆ ಮಹಾರಾಷ್ಟ್ರಕ್ಕೆ ಅಂತರರಾಜ್ಯ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆಕೆಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ತಿಳಿಸಿದ್ದರು. ಸ್ಥಳೀಯ ಪೊಲೀಸರ ನೆರವಿನಿಂದ ಬಸ್​ನಲ್ಲಿದ್ದ 39 ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಯ ಸ್ಥಳಕ್ಕೆ ತೆರಳಲು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು


Spread the love

About Laxminews 24x7

Check Also

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ

Spread the love ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚಿಕ್ಕೋಡಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ